ಸ್ಯಾಂಡಲ್‌ವುಡ್ ಕ್ವೀನ್ ಗೆ ಕ್ಯಾಂಟೀನ್ ‌ಊಟ ಸವಿಯುವಾಸೆ

ಸ್ಯಾಂಡಲವುಡ್​ ಕ್ವೀನ್​ ರಮ್ಯ ಮೇಲೆ ಮಂಡ್ಯ ಜನತೆಗೆ ಅಪಾರ ಅಭಿಮಾನ. ಈ ಅಭಿಮಾನದ ಫಲವಾಗಿಯೇ ರಮ್ಯ ಸಂಸದೆಯಾಗಿಯೂ ಆಯ್ಕೆಯಾಗಿದ್ದರು. ಇದೀಗ ರಮ್ಯ ಅಭಿಮಾನಿಗಳು ಇನ್ನೊಂದು ಹೆಜ್ಜೆ ಮುಂದೇ ಇಟ್ಟಿದ್ದು, ರಮ್ಯ ಹೆಸರಿನಲ್ಲಿ ಮಂಡ್ಯದ ಅಶೋಕನಗರದಲ್ಲಿ ಕ್ಯಾಂಟೀನ್​ ಆರಂಭಿಸಿದ್ದಾರೆ. ಇನ್ನು ಕ್ಯಾಂಟೀನ್​ ಆರಂಭಿಸಿರೋದಿಕ್ಕೆ ಸ್ವತಃ ಸಂತೋಷ ವ್ಯಕ್ತಪಡಿಸಿರುವ ರಮ್ಯ ಅದೇ ಕ್ಯಾಂಟೀನ್​ನಲ್ಲಿ ಊಟ ಸವಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಕಳೆದ ಭಾನುವಾರದಿಂದ ಸಂಸದೆ ಹಾಗೂ ಸ್ಯಾಂಡಲವುಡ್​ ಕ್ವೀನ್​ ರಮ್ಯ ಹೆಸರಿನಲ್ಲಿ ಕ್ಯಾಂಟೀನ್​​ ಆರಂಭಿಸಲಾಗಿದೆ. ರಮ್ಯ ಅಭಿಮಾನಿ ಹೊಸಹಳ್ಳಿಯ ಉದ್ಯಮಿ ರಘು ಆರಂಭಿಸಿರುವ ಈ ಕ್ಯಾಂಟೀನ್​​ನಲ್ಲಿ ಕೇವಲ 10 ರೂಪಾಯಿಗೆ ಬೆಳಗ್ಗೆ ಉಪಹಾರವಾಗಿ ಮಸಾಲೆ ದೋಸೆ, ಪ್ಲೈನ್ ದೋಸೆ, ಬೆಣ್ಣೆ ದೋಸೆ, ಈರುಳ್ಳಿ ದೋಸೆ, ರಾಗಿ ದೋಸೆ, ಪಾಲಕ್ ದೋಸೆ, ಇಡ್ಲಿ, ರೈಸ್ ಬಾತ್, ಪೂರಿ, ಚಿತ್ರನ್ನಾ, ಖಾರ ಬಾತ್ ನೀಡಲಾಗುತ್ತಿದೆ. ಮಧ್ಯಾಹ್ನ ಅನ್ನ,ಸಾಂಬಾರ, ಮುದ್ದೆ ನೀಡಲಾಗುತ್ತಿದೆ.

ಕ್ಯಾಂಟೀನ್​ಗೆ ಮಾಜಿ ಸಚಿವ ಆತ್ಮಾನಂದ ಚಾಲನೆ ನೀಡಿದ್ದಾರೆ. ಮಂಡ್ಯದ ಮಿಮ್ಸ್​ ಆಸ್ಪತ್ರೆ ಪಕ್ಕದಲ್ಲೇ ಈ ಕ್ಯಾಂಟೀನ್ ತೆರೆಯಲಾಗಿರೋದರಿಂದ ಬಡವರಿಗೆ ಸಹಾಯವಾಗುತ್ತಿದೆ . ಇನ್ನು ತಮ್ಮ ಹೆಸರಿನಲ್ಲಿ ಮಂಡ್ಯದಲ್ಲಿ  ಕ್ಯಾಂಟೀನ್​ ಉದ್ಘಾಟನೆಯಾಗಿರೋದಿಕ್ಕೆ ಖುಷಿ ವ್ಯಕ್ತಪಡಿಸಿರುವ ನಟಿ -ಸಂಸದೆ ರಮ್ಯ, ಟ್ವಿಟರ್​​ನಲ್ಲಿ  ಸಮಯ ಸಿಕ್ಕಾಗಲೆಲ್ಲ ಅದೇ ಕ್ಯಾಂಟೀನ್​ಗೆ ಬಂದು ಊಟ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್​ನ ಇಂದಿರಾ ಕ್ಯಾಂಟೀನ್, ಜೆಡಿಎಸ್​​ನ  ಅಪ್ಪಾಜಿ ಕ್ಯಾಂಟೀನ್​​ ಸಾಲಿಗೆ ಇದೀಗ ಕಾಂಗ್ರೆಸ್​ನ ಯುವನಾಯಕಿ ರಮ್ಯ ಕ್ಯಾಂಟೀನ್​ ಕೂಡ ಸೇರ್ಪಡೆಯಾಗಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.