ಮಹದಾಯಿಗಾಗಿ ಮಿಡಿಯಲಿಲ್ಲ ಮಂಗಳೂರು- ತುಳುಕಾರ್ಯಕರ್ತರು ಕರವೇ ನಡುವೆ ವಾಗ್ವಾದ

ಮಹದಾಯಿಗಾಗಿ ಕರ್ನಾಟಕ ರಾಜ್ಯದಾದ್ಯಂತ ಬಂದ್​​ ತೀವ್ರಗೊಂಡಿದ್ದರೂ ಮಂಗಳೂರು ಜಿಲ್ಲೆಯಾದ್ಯಂತ ಬಂದ್​​ ನಡೆಸದೇ ಹೋರಾಟಕ್ಕೆ ತುಳುನಾಡು ತಮ್ಮ ಬೆಂಬಲವಿಲ್ಲ ಎಂಬುದನ್ನು ಅಲ್ಲಿನ ಜನರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಕರಾವಳಿಯ ಜೀವನದಿ ನೇತ್ರಾವತಿಗಾಗಿ ಮಂಗಳೂರಿನಲ್ಲಿ ನಡೆದಿದ್ದ ಹೋರಾಟದ ವೇಳೆ ರಾಜ್ಯದ ಇತರ ಭಾಗಗಳಿಂದ ಬೆಂಬಲ ವ್ಯಕ್ತವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೊಂದ ಮಂಗಳೂರಿನ ಜನರು ಮಹದಾಯಿ ಹೋರಾಟಕ್ಕೆ ಬೆಂಬಲ ನೀಡದಿರಲು ನಿರ್ಧರಿಸಿದ್ದಾರೆ. ಅಲ್ಲದೇ ನೇತ್ರಾವತಿ ಹೋರಾಟದ ವೇಳೆಯಲ್ಲಿ ಕನ್ನಡಪರ ಸಂಘಟನೆಗಳು ಕೂಡ ಬಂದ್ ಗೆ ಕೈ ಜೋಡಿಸಿರಲಿಲ್ಲ. ಹೀಗಾಗಿ ತುಳುನಾಡು ಮಹದಾಯಿ ಹೋರಾಟಕ್ಕೆ ಸ್ಪಂದಿಸಿಲ್ಲ. ಈ ಮಧ್ಯೆ ರೇಲ್ವೇ ನಿಲ್ದಾಣದಲ್ಲಿ ಪ್ರತಿಭಟನೆಗೆ ಆಗಮಿಸಿದ ಕರವೇ ಕಾರ್ಯಕರ್ತರನ್ನು ತುಳು ಸಂಘಟನೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ತುಳುವರ ಬಗ್ಗೆ ಕೆಲ ಕನ್ನಡಿಗರಿಂದ ಸಾಮಾಜಿಕ ತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್​​ಗಳನ್ನು ಹಾಕಲಾಗಿದ್ದು, ಇದನ್ನು ಪ್ರಶ್ನಿಸಿ ತುಳುಕಾರ್ಯಕರ್ತರು ಕರವೇ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಮಂಗಳೂರಿನಲ್ಲಿ ನಿಮ್ಮ ಪ್ರತಿಭಟನೆ ಅಗತ್ಯವಿತ್ತಾ ಎಂದು ಪ್ರಶ್ನಿಸಿದರು. ಈ ವೇಳೆ ಕೆಲಕಾಲ ಕರವೇ ಮತ್ತು ತುಳು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಒಟ್ಟಿನಲ್ಲಿ ಮಹದಾಯಿ ವಿವಾದಕ್ಕೆ ಮಂಗಳೂರು ಸ್ಪಂದಿಸದೇ ತಟಸ್ಥವಾಗಿರೋದಂತು ನಿಜ.