ಲಿಂಗೈಕ್ಯರಾದ ಬಸವ ಧರ್ಮ ಪೀಠದ ,ಮಾತೆ ಮಹಾದೇವಿಯ ಅಂತ್ಯ ಸಂಸ್ಕಾರ ನಾಳೆ ನೆರವೇರಲಿದೆ

ತೀವ್ರ ಅನಾರೋಗ್ಯದಿಂದ ಲಿಂಗೈಕ್ಯರಾದ ಬಸವ ಧರ್ಮ ಪೀಠದ ಮಾತೆ ಮಹಾದೇವಿ ಅವ್ರ ಅಂತ್ಯ ಸಂಸ್ಕಾರ ನಾಳೆ ಕೂಡಲ ಸಂಗಮದಲ್ಲಿ ನೆರವೇರಲಿದೆ. ನಿನ್ನೆ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ರು. ಇಂದು ಬೆಂಗಳೂರಿನ ರಾಜಾಜಿನಗರದಲ್ಲಿರೋ ಬಸವಮಂಟಪದಲ್ಲಿ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನದ ನಂತರ ಚಿತ್ರದುರ್ಗಕ್ಕೆ ಕೊಂಡೊಯ್ದು ನಂತರ ಬಾಗಲಕೋಟೆಯ ಕೂಡಲ ಸಂಗಮಕ್ಕೆ ಒಯ್ದು ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ. ಅಪಾರ ಸಂಖ್ಯೆಯ ಭಕ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

1946, ಮಾರ್ಚ್ 13ರಂದು ಚಿತ್ರದುರ್ಗದ ಸಾಲಹಟ್ಟಿಯಲ್ಲಿ ಗಂಗಮ್ಮ ಮತ್ತು ಡಾ. ಬಸಪ್ಪ ದಂಪತಿಗೆ ಜನಿಸಿದವರು ಮಾತೆ ಮಹಾದೇವಿ. ಇವರ ಪೂರ್ವಾಶ್ರಮದ ಹೆಸರು ರತ್ನ. ಗುರು ಲಿಂಗಾನಂದ ಅವರಿಂದ ಸ್ಫೂರ್ತಿ ಪಡೆದು 1996ರಲ್ಲಿ ರತ್ನ ಅವರು ಜಂಗಮ ದೀಕ್ಷೆ ಪಡೆದು ಮಾತೆ ಮಹಾದೇವಿಯಾದರು.


ಅರವತ್ತರ ದಶಕದಿಂದಲೇ ಬಸವಧರ್ಮ ತತ್ವಗಳ ಬಗ್ಗೆ ಅಪರಿಮಿತ ಆಸಕ್ತಿ ಬೆಳೆಸಿಕೊಂಡಿದ್ದ ಮಾತೆ ಮಹಾದೇವಿ ಅವರು ಜಂಗಮ ದೀಕ್ಷೆ ಪಡೆದ ಬಳಿಕ ಸಾಕಷ್ಟು ಧರ್ಮಸೇವೆಗಳನ್ನು ಮಾಡಿದ್ದಾರೆ. 1970ರಲ್ಲಿ ಅಕ್ಕ ಮಹಾದೇವಿ ಅನುಭವ ಪೀಠ ಸ್ಥಾಪಿಸಿದರು. ಇದು ವಿಶ್ವದ ಮೊತ್ತಮೊದಲ ಮಹಿಳಾ ಜಗದ್ಗುರು ಪೀಠವಾಗಿದೆ. ಇದರ ಪೀಠಾಧ್ಯಕ್ಷರಾಗಿ ಮಾತೆ ಮಹಾದೇವಿ ಅವರು ವಿಶ್ವದ ಮೊದಲ ಮಹಿಳಾ ಜಂಗಮರೆನಿಸಿದ್ದಾರೆ. ಹಾಗೆಯೇ, ಮಾತೆ ಮಹಾದೇವಿ ಅವರು “ಬಸವ ತತ್ವ ದರ್ಶನ”, “ಹೆಪ್ಪಿಟ್ಟ ಹಾಲು” ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ಧಾರೆ.