ಮಂಡ್ಯದಲ್ಲಿ ಒಂದಾದ ಜೋಡೆತ್ತುಗಳು ​​​​​ ತೆರೆ ಮೇಲೂ ಜೋಡಿಯಾಗಿ ಮೋಡಿ ಮಾಡ್ತಾರಾ? ಸಿಕ್ತಿದೆ ಹೊಸ ಸುದ್ದಿ!!

ಲೋಕಸಭಾ ಚುನಾವಣೆಯ ಅಖಾಡದಲ್ಲಿ  ಮಂಡ್ಯ ಕ್ಷೇತ್ರ  ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿಯೂ ಭಾರಿ ಸದ್ದು ಮಾಡುತ್ತಿದೆ. ಮಂಡ್ಯದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಯವರು ಸ್ಪರ್ಧಿಸುತ್ತಿದ್ದು ನಿಖಿಲ್ ಕುಮಾರಸ್ವಾಮಿ ಪ್ರತಿ ಸ್ಪರ್ಧಿಯಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಸ್ಪರ್ಧಿಸುತ್ತಿದ್ದಾರೆ. ಈ ಮಧ್ಯೆ ಸುಮಲತಾ ಪರ ಪ್ರಚಾರಕ್ಕಾಗಿ ಒಂದಾಗಿರುವ ಜೋಡೆತ್ತು ದರ್ಶನ್​ ಮತ್ತು ಯಶ್​ ತೆರೆ ಮೇಲೂ ಒಂದಾಗುತ್ತಿದ್ದಾರೆ ಎಂಬ ಸುದ್ಧಿಯಿಂದ ಸ್ಯಾಂಡಲವುಡ್​​​ ಫುಲ್​ ಖುಷಿಯಾಗಿದೆ.

 

ಪಕ್ಷೇತರ ಅಭ್ಯರ್ಥಿ ಸುಮಲತಾರಿಗೆ ಸ್ಯಾಂಡಲ್ ವುಡ್ ನ ಖ್ಯಾತ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಚುನಾವಣಾ ಪ್ರಚಾರದಲ್ಲಿ ಸಾಥ್ ನೀಡುತ್ತಿರುವುದು ಈಗ ಹಳೆಯ ವಿಚಾರ. ಈ ಬಗ್ಗೆ  ಸುದ್ದಿಗೋಷ್ಠಿ ನಡೆಸಿದ್ದ  ನಟ ದರ್ಶನ್ ರವರು ನಾವಿಬ್ಬರೂ 2 ಜೋಡೆತ್ತುಗಳ ಮಾದರಿಯಲ್ಲಿ ಸುಮಲತಾ ಅವರನ್ನು ಬೆಂಬಲಿಸುವುದಕ್ಕೆ ತೀರ್ಮಾನಿಸಿದ್ದೇವೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಜೋಡೆತ್ತು ಎಂಬ ಪದವು ಎಲ್ಲೆಡೆ ಬಹಳ ಸುದ್ದಿ ಮಾಡಿತ್ತು.

 

ಸದ್ಯ ಜೋಡೆತ್ತು ಎಂಬ ಪದಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬಾರಿ ಬೇಡಿಕೆ ಇದ್ದು, ಹಲವು ನಿರ್ಮಾಪಕರು , ನಿರ್ದೇಶಕರು ತಮ್ಮ ಸಿನಿಮಾದ ಟೈಟಲ್ ಗೆ ಜೋಡೆತ್ತು ಎಂಬ ಟೈಟಲ್ ಲೇ ಬೇಕೆಂದು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದಿದ್ದಾರೆ. ಜೋಡೆತ್ತು ಟೈಟಲ್​ ರಜಿಸ್ಟ್ರೇಶನ್​ಗೂ ಸಿದ್ಧತೆ ನಡೆದಿದೆ.

 

ಕೆಲವು ದಿನಗಳ ಹಿಂದೆ ವೈರಿಗಳಂತೆ ಇದ್ದ ದಚ್ಚು ಹಾಗೂ ಯಶ್ ಚುನಾವಣೆಯ ಪ್ರಚಾರದ ಕೈ ಜೋಡಿಸುವ ಮೂಲಕ ಒಂದಾಗಿದ್ದು, ನಟ ‘ಡಿ ಬಾಸ್ ‘ಗೆ ಮಾಧ್ಯಮದ ಪ್ರತಿನಿಧಿಗಳು ಇಬ್ಬರು ಒಟ್ಟಾಗಿ ಜೋಡೆತ್ತು ಶೀರ್ಷಿಕೆಯುಳ್ಳ ಚಿತ್ರವನ್ನು ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ದರ್ಶನ್ ರವರು ಹೌದು ಎಂದು ಪ್ರತಿಕ್ರಿಯಿಸಿದ್ದಾರೆ.

 

ಒಟ್ಟಾರೆಯಾಗಿ ಚುನಾವಣಾ ಪ್ರಚಾರಕ್ಕಾಗಿ ಒಂದಾದ ಗಜ ಮತ್ತು ಗಜಕೇಸರಿಯ ಈ ಜೋಡಿಯು ಮುಂಬರುವ ದಿನಗಳಲ್ಲಿಯೂ ತೆರೆಯ ಮೇಲೆ ಒಂದುಗೂಡಿ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದ್ದು, ಯಾವ ಚಿತ್ರದಲ್ಲಿ ಈ ಸ್ಟಾರ್ ಜೋಡಿ ಮೋಡಿ ಮಾಡಲಿದೆ ಎಂಬುದನ್ನು ಸಿನಿರಸಿಕರು ಕಾದು ನೋಡಬೇಕಾಗಿದೆ.