ಚಾಲಕನ ನಿಯಂತ್ರಣ ತಪ್ಪಿ ಹಾಲಿನ ವಾಹನ ಪಲ್ಟಿಯಾದ ಪರಿಣಾಮ ರಸ್ತೆಯಲ್ಲಿ ಹಾಲಿನ ಹೊಳೆ ಹರಿದ ಘಟನೆ ಚಿಕ್ಕಬಳ್ಳಾಪುರ ಹೊರವಲಯದ ವಾಪಸಂದ್ರ ಮೇಲ್ ಸೇತುವೆ ಬಳಿ ನಡೆದಿದೆ. ಡೈರಿಗೆ ತೆರಳುತ್ತಿದ್ದ ಹಾಲಿನ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದ್ದು, ರಸ್ತೆಯಲ್ಲಿ ಹಾಲಿನ ಹೊಳೆಯೇ ಹರಿದು ವ್ಯರ್ಥವಾಯಿತು.
ಶಿಢ್ಲಘಟ್ಟ ತಾಲೂಕಿನ ಸಾದಲಿಯಿಂದ ಬೆಂಗಳೂರಿನ ಯಲಹಂಕ ಮದರ್ ಡೈರಿಗೆ ಹಾಲಿನ ಟ್ಯಾಂಕರ್ ತೆರಳುತಿತ್ತು. ಈ ವೇಳೆ ಎದುರನಿಂದ ಬೈಕ್ ತಪ್ಪಿಸುವ ಪ್ರಯತ್ನದಲ್ಲಿ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ 15 ಸಾವಿರ ಲೀಟರ್ ಹಾಲು ರಸ್ತೆಯಲ್ಲಿ ಹರಿದಿದೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ಗೂ ಸಣ್ಣ-ಪುಟ್ಟ ಗಾಯವಾಗಿದ್ದು, ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಲು ರಸ್ತೆಯಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದನ್ನು ಕಂಡ ಜನರು ಸಿಕ್ಕಿದ್ದೆ ಸೀರುಂಡೆ ಎಂಬಂತೆ ಬಾಟಲಿಗಳು ಹಾಗೂ ಕ್ಯಾನ್ಗಳಲ್ಲಿ ಹಾಲು ತುಂಬಿಕೊಂಡು ಓಡುತ್ತಿದ್ದ ದೃಶ್ಯ ಕಂಡುಬಂತು. ಇನ್ನು ಕೆಲವರು ರಸ್ತೆಯಲ್ಲಿ ಹಾಲು ಹರಿದು ಹೋಗುತ್ತಿರುವುದನ್ನು ಕಂಡು ಮೊಬೈಲ್ನಲ್ಲಿ ಚಿತ್ರೀಕರಿಸುವುದರಲ್ಲೇ ಬ್ಯುಸಿಯಾಗಿದ್ದರು.