ಬಾಗಲಕೋಟೆಯಲ್ಲೊಂದು ಸಂಸತ್ ಮಾದರಿಯ ಮಿನಿ ವಿಧಾನಸೌಧ.

ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ದೆಹಲಿ ಸಂಸತ್ ಭವನ ಮಾದರಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಿದೆ. ಇವತ್ತು ಕಂದಾಯ ಸಚಿವ ಕಾಗೋಡ ತಿಮ್ಮಪ್ಪ ಈ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ದೇಶದಲ್ಲಿ ದೆಹಲಿ ಸಂಸತ್ ಭವನದ ನಂತರ ಅದೇ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧ ಇದಾಗಿದೆ. ಅಂದಾಜು 15 ಕೋಟಿ ರೂ. ವೆಚ್ಚದ ಕಟ್ಟಡದ ಕಾಮಗಾರಿಯನ್ನು ಕೇವಲ 11 ತಿಂಗಳಲ್ಲಿ ಮುಗಿಸಿರೋದು ಈ ಕಟ್ಟಡದ ಇನ್ನೊಂದು ಹೆಗ್ಗಳಿಕೆಯಾಗಿದೆ.

ಅಂದಾಜು 3ಎಕರೆ ಜಮೀನಿನಲ್ಲಿ 84 ಸಾವಿರ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗಿದೆ. ನೆಲ ಮಾಳಿಗೆ ಮತ್ತು ಇತರೆ 3 ಅಂತಸ್ತಿನ ಕಟ್ಟಡ ಇದಾಗಿದೆ. ಒಟ್ಟು 80 ಕೊಠಡಿಗಳನ್ನು ಒಳಗೊಂಡಿದೆ. ಉಪವಿಭಾಗಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಸೇರಿ ಅವುಗಳ ವ್ಯಾಪ್ತಿಗೆ ಒಳಪಡುವ ಎಲ್ಲ ಇಲಾಖೆ ಕಚೇರಿಗಳು ಈ ನೂತನ ಕಟ್ಟಡದಲ್ಲಿರಲಿವೆ. ಕಟ್ಟಡದಲ್ಲೇ 35 ಕಾರುಗಳು ಹಾಗೂ 300 ಬೈಕ್ ಗಳ ಪಾರ್ಕಿಂಗ್,ಎರಡು ಲಿಫ್ಟ್​ಗಳು ಮೂರು ಸ್ಟೇರ್ ಕೇಸ್, ಒಂದು ಱಂಪ್ ವ್ಯವಸ್ಥೆ ಇದೆ. ದೆಹಲಿ ಪಾರ್ಲಿಮೆಂಟ್​ಗೆ ಬಳಕೆ ಮಾಡಿರುವ ಜೈಪುರ ರೆಡ್ ಸ್ಯಾಂಡ್ ಸ್ಟೋನ್ ಮತ್ತು ಪಿಂಕ್ ಸ್ಟೋನ್​ಗಳನ್ನು ಈ ಕಟ್ಟಡಕ್ಕೆ ಬಳಕೆ ಮಾಡಲಾಗಿದೆ.