ಶಾಸಕ ಸಿದ್ದು ನ್ಯಾಮೆಗೌಡ ಇನ್ನಿಲ್ಲ !!

 

ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿಯ ಬಳಿ ಹೆದ್ದಾರಿಯಲ್ಲಿ ಇಂದು ಬೆಳಗ್ಗಿನ ವೇಳೆ ಸಂಭವಿಸಿದ ಅಪಘಾತದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಜಮಖಂಡಿಯ ಶಾಸಕ ಸಿದ್ದು ನ್ಯಾಮಗೌಡ ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಸಿದ್ದು ನ್ಯಾಮಗೌಡ ಅವರ ಎದೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ವೈದ್ಯರು ಸಿದ್ದು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.ದೆಹಲಿಯ ನಿಜಾಮುದ್ದಿನ್ ಔಲಿಯಾ ದರ್ಗಾಕ್ಕೆ ತೆರಳಿದ್ದ ಅವರು ವಿಮಾನದ ಮೂಲಕ ಪಣಜಿಗೆ ಬಂದು ಅಲ್ಲಿಂದ ಇನ್ನೋವಾ ಕಾರಿನಲ್ಲಿ ಜಮಖಂಡಿಗೆ ವಾಪಸ್ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.ತೀವ್ರ ಗಾಯಗೊಂಡು ಪ್ರಜ್ಞೆಹೀನರಾಗಿದ್ದ ಸಿದ್ದು ನ್ಯಾಮಗೌಡರನ್ನು ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 6.15ಕ್ಕೆ ಸಾವಿಗೀಡಾಗಿದ್ದಾರೆ. ವೈದ್ಯರು ಹೇಳುವ ಪ್ರಕಾರ ಆಸ್ಪತ್ರೆಗೆ ಕರೆತರುವಾಗಲೇ ಉಸಿರು ನಿಂತಿತ್ತು. ಸಿದ್ದು ಅವರೊಂದಿಗೆ ಇದ್ದವರಲ್ಲಿ ಮೂವರ ಪರಿಸ್ಥಿತಿ ಗಂಭೀರವಾಗಿದೆ.ಕಾರಿನ ಚಾಲಕ ಪರಮಾನಂದ ಅಂಬಿ, ಅನ್ವರ್ ಮೋಮಿನ್, ಮೌಲಾನಾ ರಜವಿ, ಅಬ್ದುಲ್ ರಶೀದ್ ಮೊದಲಾದವರಿಗೆ ಗಂಭೀರ ಗಾಯಗಳಾಗಿವೆ.

 

ಸಿದ್ದು ನ್ಯಾಮಗೌಡ ಅವರಿಗೆ ಪತ್ನಿ, ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ.ಸರ್ಕಾರದ ನೆರವು ಇಲ್ಲದೇ ರೈತರಂದ ವಂತಿಗೆ ಸಂಗ್ರಹಿಸಿ ಕೃಷ್ಣಾ ನದಿಗೆ ಚಿಕ್ಕಪಡಸಲಗಿ ಬಳಿ ಬ್ಯಾರೇಜ್ ನಿರ್ಮಿಸಿದ್ದ ಸಿದ್ದು ನ್ಯಾಮಗೌಡ, ಬ್ಯಾರೇಜ್ ನ್ಯಾಮಗೌಡ ಎಂದೇ ಹೆಸರಾಗಿದ್ದರು.ಬ್ಯಾರೇಜ್ ಜನಪ್ರಿಯತೆಯೇ 1991 ರಲ್ಲಿ ಬಾಗಲಕೋಟೆಯಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ವಿರುದ್ಧ ಗೆಲುವು ಸಾಧಿಸಲು ಮೆಟ್ಟಿಲಾಗಿ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಕೇಂದ್ರದ ಕಲ್ಲಿದ್ದಲು ಖಾತೆ ಸಚಿವರಾಗಿ ಕೆಲಸ ಮಾಡಿದ್ದರು. ಮೂರು ಬಾರಿ ಶಾಸಕರಾಗಿರುವ ಸಿದ್ದು ನ್ಯಾಮಗೌಡ ಇದೀಗ ಸತತ ಎರಡನೇ ಬಾರಿ ಜಮಖಂಡಿ ಕ್ಷೇತ್ರ ಪ್ರತಿನಿಧಿಸಿದ್ದರು.ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಸಿದ್ದು, 2013ರಲ್ಲಿ ರಲ್ಲಿ ಜಮಖಂಡಿಯಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2018 ರ ವಿಧಾನಸಭೆ ಚುನಾವಣೆಯಲ್ಲಿ 2ನೇ ಬಾರಿ ಆಯ್ಕೆಯಾಗಿದ್ದರು.ಜಮಖಂಡಿ ಹಾಗೂ ವಿಜಯಪುರ ಜಿಲ್ಲೆ ಸಿಂದಗಿ ಬಳಿಯ ನಾದ ಕೆ.ಡಿ ಗ್ರಾಮದಲ್ಲಿ ಸಿದ್ದು ನ್ಯಾಮಗೌಡ ಕುಟುಂಬದ ಒಡೆತನದಲ್ಲಿ ಜಮಖಂಡಿ ಶುಗರ್ಸ್ ಹೆಸರಿನ ಎರಡು ಸಕ್ಕರೆ ಕಾರ್ಖಾನೆಗಳಿವೆ.ಮಕ್ಕಳಿಬ್ಬರು ವಿದೇಶದಿಂದ ಬರಬೇಕಿರುವ ಹಿನ್ನಲೆಯಲ್ಲಿ ನಾಳೆ ಅಂತ್ಯಸಂಸ್ಕಾರ ನಡೆಯಲಿದೆ. ಜಮಖಂಡಿಯ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.