ಮೋದಿ, ಮೋದಿ ಅನ್ನೋದು ಸ್ಲೋಗನ್​ ಆಗಬಾರದು! ಮೋದಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು! ನಿರ್ಮಲ ಸೀತಾರಾಮ!!

ಮೋದಿ ಮೋದಿ ಅನ್ನೋದು ಕೇವಲ ಸ್ಲೋಗನ್​ ಆಗಬಾರದು. ಅವರನ್ನು ಇನ್ನೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ ಕರೆ ಕೊಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ನಿರ್ಮಲಾ ಸೀತಾರಾಮ್, ಸೈನಿಕರನ್ನು ಅವಮಾನಿಸುವ ಕಾಂಗ್ರೆಸ್​ಗೆ ತಕ್ಕ ಉತ್ತರ ನೀಡಬೇಕು ಎಂದರು.

ಬಾಲಾಕೋಟ್ ದಾಳಿಯನ್ನು ಉಲ್ಲೇಖಿಸಿದ  ನಿರ್ಮಲಾ ಸೀತಾರಾಮ್,  ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತರಲು ಮೋದಿ ನೇತೃತ್ವದ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಮೋದಿ ಒಂದು ಮಾಣಿಕ್ಯವಿದ್ದಂತೆ ಅವರನ್ನು ಉಳಿಸಿಕೊಳ್ಳುವ, ಕಾಪಾಡಿಕೊಳ್ಳುವ ಪ್ರಯತ್ನ ನಮ್ಮದಾಗಬೇಕು ಎಂದರು.

 

ಕಾರವಾರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ, ಗೋವಾ ಸಿಎಂ ಪ್ರಮೋದ್ ಸಾವಂತ್ ಸಾಥ್ ನೀಡಿದರು. ಇದಕ್ಕೂ ಮುನ್ನ ಕಾರವಾರಕ್ಕೆ ಆಗಮಿಸುತ್ತಿದ್ದಂತೆ ನಿರ್ಮಲಾ ಸೀತಾರಾಮ ಅವರಿಗೆ ಚುನಾವಣಾ ಅಧಿಕಾರಿಗಳು ಸಖತ್ ಶಾಕ್ ನೀಡಿದರು.

ನಿರ್ಮಲಾ ಸೀತಾರಾಮ ಆಗಮಿಸಿದ ಹೆಲಿಕ್ಯಾಪ್ಟರ್​ ನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿ ಬಳಿಕ  ಹಾರಾಟಕ್ಕೆ ಅನುವು ಮಾಡಿಕೊಟ್ಟರು. ಇನ್ನು ಪ್ರಚಾರ ಸಭೆಗೂ ಪೂರ್ವದಲ್ಲಿ ನಗರದ ಮಿತ್ರ ಸಮಾಜದಿಂದ ಬೃಹತ್ ರ್ಯಾಲಿ ನಡೆಯಿತು. ಈ ವೇಳೆ ನಿರ್ಮಲಾ ಸೀತಾರಾಮ ಅನಂತಕುಮಾರ್ ಹೆಗಡೆ ಪರ ಮತಯಾಚನೆ ಮಾಡಿದರು.

ಇನ್ನು ಇದಕ್ಕೂ ಮುನ್ನ ನಿರ್ಮಲಾ ಸೀತಾರಾಮ,  ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರ ಭರ್ಜರಿ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ನಿರ್ಮಲಾ  ‘2047 ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು ಶತಮಾನೋತ್ಸವ ಆಚರಣೆ ಮಾಡುವ ವೇಳೆ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಬೇಕೆಂಬುವುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ’ ಎಂದು ಹೇಳಿದರು.