ಮಠ ವಶಕ್ಕೆ ಪಡೆದು ನಾವೇನ್ರಿ ಮಾಡೋಣ- ಮಾಧ್ಯಮದ ಎದುರು ಸಿಡುಕಿದ ಸಿಎಂ ಸಿದ್ದು!

ರಾಜ್ಯದಲ್ಲಿರುವ ಮಠಗಳನ್ನು ಸುಪರ್ಧಿಗೆ ತೆಗೆದುಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇಲ್ಲ, ‘ಮಠ ತಗೊಂಡು ನಾವೇನ್ರಿ ಮಾಡೋಣ’ ಎಂದು ಸಿಎಂ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಸಿಡುಕಿದ್ದಾರೆ.

ಈಗಲೂ ನಾನು ಮಠಕ್ಕೇ ಬಂದಿದ್ದೇನೆ. ಮಠಗಳನ್ನು, ದೇವಸ್ಥಾನಗಳನ್ನು ವಶಕ್ಕೆ ಪಡೆದು ನಾನೇನು ಮಾಡಲಿ ಎಂದು ಸಿಎಂ ಕೋಪದಿಂದ ಪ್ರಶ್ನಿಸಿದರು. ದಾವಣಗೆರೆ ಜಿಲ್ಲೆ ಹರಿಹರದ ಬೆಳ್ಳೋಡಿ ಕನಕಗುರುಪೀಠ ದ ಬೆಳ್ಳಿ ಉತ್ಸವಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜೊತೆ ಮಾತನಾಡುತ್ತಿದ್ದರು. ಮಠಗಳು, ದೇವಸ್ಥಾನಗಳನ್ನು ವಶಕ್ಕೆ ಪಡೆಯುವ ಯಾವ ಉದ್ದೇಶವೂ ನಮಗೆ ಇಲ್ಲ. ನ್ಯಾಯಾಲಯದ ಆದೇಶ ಪಾಲಿಸಲು ಪ್ರಕಟಣೆ ಹೊರಡಿಸಿದ್ದೇವು.

ಈ ಹಿಂದೆ ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗಲೂ ಕೂಡ ಇಂತಹುದೇ ಪ್ರಕಟಣೆ ಹೊರಡಿಸಿದ್ದರು, ಅವರೇನು ಮಠಗಳನ್ನು ವಶಕ್ಕೆ ಪಡೆಯಲು ಮಾಡಿದ್ದರೇ ಎಂದು ಪ್ರಶ್ನಿಸಿದ ಸಿಎಂ 2006ರಲ್ಲಿ ಡಿವಿಷನ್ ಬೆಂಚ್‌ನಿಂದ ಬಂದ ತೀರ್ಪಿಗೆ ಅನುಗುಣವಾಗಿ ಆ ಪ್ರಕಟಣೆಯನ್ನು ಹೊರಡಿಸಲಾಗಿತ್ತಷ್ಟೆ ನಮಗೆ ಮಠಗಳನ್ನು ಸುಪರ್ಧಿಗೆ ತೆಗೆದುಕೊಳ್ಳುವ ಉದ್ದೇಶ ಇಲ್ಲ ಎಂದರು. ಇನ್ನು ಚುನಾವಣಾ ಮೈತ್ರಿ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮಗೆ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಅಗತ್ಯ ಇಲ್ಲ, ಏಕಾಂಗಿಯಾಗಿ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ. ಹೈಕಮಾಂದ ಈಗಾಗಲೇ ಚುನಾವಣಾ ವೀಕ್ಷಕರನ್ನು ರಾಜ್ಯದ ಕ್ಷೇತ್ರಗಳಿಗೆ ಕಳುಹಿಸಿದ್ದು, ಪಕ್ಷದ ವತಿಯಿಂದ ಸಮೀಕ್ಷೆ ಜಾರಿಯಲ್ಲಿದೆ. ಸಮೀಕ್ಷೆ ಆಧರಿಸಿ ಟಿಕೆಟ್ ನೀಡಲಾಗುತ್ತದೆ ಎಂದರು.