ಕಸದ ತೊಟ್ಟಿಯಲ್ಲಿ ಸಿಕ್ತು ರಾಶಿ-ರಾಶಿ ಬುರುಡೆ- ಬೆಚ್ಚಿಬಿದ್ದ ಮೈಸೂರು ಜನತೆ

 

ad


ರಾಜ್ಯದಲ್ಲಿ ಮೌಡ್ಯ ನಿಷೇಧ ಕಾನೂನು ಜಾರಿಯಾದ ಬೆನ್ನಲ್ಲೇ ಸಿಎಂ ತವರು ಜಿಲ್ಲೆ ಮೈಸೂರಿನ ಕಸದ ತೊಟ್ಟಿಯೊಂದರಲ್ಲಿ 13 ಕ್ಕೂ ಹೆಚ್ಚು ತಲೆಬುರುಡೆಗಳು ಪತ್ತೆಯಾಗಿದೆ.

ಕಾನೂನು ಜಾರಿಯಾದ ಬೆನ್ನಲ್ಲೇ ಭಾರಿ ಪ್ರಮಾಣದಲ್ಲಿ ತಲೆಬುರುಡೆಗಳು ಪತ್ತೆಯಾಗಿದ್ದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಮೈಸೂರಿನ ವಿಜಯನಗರ 2ನೇ ಹಂತದ ಹಾಕಿದ್ದ ಕಸದ ರಾಶಿಯಲ್ಲಿ 13ಕ್ಕೂ ಹೆಚ್ಚು ತಲೆ ಬುರುಡೆ ಪತ್ತೆಯಾಗಿವೆ. ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಬಳಿ ಖಾಲಿ ಸೈಟ್​ನಲ್ಲಿ ಇವತ್ತು ಬೆಳಿಗ್ಗೆ ಕಸ ಎತ್ತಲು ಬಂದ ಪೌರ ಕಾರ್ಮಿಕರ ಕಣ್ಣಿಗೆ ತಲೆ ಬುರುಡೆಗಳು ಗೋಚರವಾಗಿವೆ. ಚೀಲದಲ್ಲಿ ಕಟ್ಟಿಟ್ಟಿದ್ದ ತಲೆ ಬುರುಡೆಗಳ ಪೈಕಿ ಸಣ್ಣ ಮಕ್ಕಳ ತಲೆ ಬುರುಡೆಗಳೂ ಪತ್ತೆಯಾಗಿವೆ. ಅಕ್ಕಪಕ್ಕ ಸ್ಮಶಾನ ಇಲ್ಲದಿದ್ದರೂ ಬುರುಡೆಗಳು ಪತ್ತೆಯಾಗಿರೋದು ಅನುಮಾನಕ್ಕೆ ಕಾರಣವಾಗಿದೆ.

ತಲೆ ಬುರುಡೆಗಳು ಸಿಕ್ಕ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದು, ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಬುರುಡೆಗಳನ್ನು ವಶಕ್ಕೆ ಪಡೆದಿದ್ದಾರೆ. ಮಾಟ ಮಂತ್ರ ಮಾಡಿಸಲು ತಲೆ ಬುರುಡೆ ಸಂಗ್ರಹ ಮಾಡಲಾಗಿದ್ದು, ಕಾನೂನು ಜಾರಿಯಾದ ಮೇಲೆ ಸಿಕ್ಕಿ ಬೀಳುವ ಭಯದಿಂದ ಮನೆಯಿಂದ ಹೊರಕ್ಕೆ ತಂದು ಎಸೆದಿರುವ ಸಾಧ್ಯತೆ ಇದೆ. ಇನ್ನು ಮಾಟಕ್ಕೆ ಈ ಬುರುಡೆ ಬಳಸಲು ಸಂಗ್ರಹಿಸಲಾಗಿತ್ತು ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಹೀನಕಲ್ ಗ್ರಾಮಸ್ಥರು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ. ಪೊಲೀಸರ ತನಿಖೆಯಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.