ಚೆಲುವರಾಯಸ್ವಾಮಿ, ಜಮೀರ್ ವಿರುದ್ಧ ವಾಗ್ದಾಳಿ!! ನಾಗಮಂಗಲದ ಕುಮಾರಪರ್ವದ ಸಂಪೂರ್ಣ ವರದಿ.

ಇತ್ತೀಚೆಗೆ ಕಾಂಗ್ರೆಸ್ ಸೇರಿದ ಜೆಡಿಎಸ್ ಬಂಡಾಯ ನಾಯಕ ಚಲುವರಾಯಸ್ವಾಮಿ ಸ್ವಕ್ಷೇತ್ರ ನಾಗಮಂಗಲದಲ್ಲಿ ಕುಮಾರ ಪರ್ವ ನಡೆಯಿತು. ಜೆಡಿಎಸ್ ನಾಯಕರು ಬಂಡಾಯ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಲು ವೇದಿಕೆ ಮಾಡಿಕೊಂಡ್ರು ಈ ಕುರಿತ ರಿಪೋರ್ಟ್ ಇಲ್ಲಿದೆ‌.

ಜೆಡಿಎಸ್ ಬಂಡಾಯ ಶಾಸಕರಾಗಿದ್ದ ಚಲುವರಾಯಸ್ವಾಮಿ ಸ್ವಕ್ಷೇತ್ರ ನಾಗಮಂಗಲ ದಲ್ಲಿ ಕುಮಾರ ಪರ್ವದ ಮೂಲಕ ಜೆಡಿಎಸ್ ಪಕ್ಷ ಕ್ಷೇತ್ರದ ತಮ್ಮ ಅಭ್ಯರ್ಥಿ ಸುರೇಶ್ ಗೌಡ ಪರ ಅಬ್ಬರದ ಪ್ರಚಾರ ನಡೆಸಿದ್ರು. ಜೊತೆಗೆ ನಾಗಮಂಗಲ ಪಟ್ಟಣದಲ್ಲಿ ರೋಡ್ ಷೋ ಸಹ ನಡೆಸಿ ಸುರೇಶ್ ಗೌಡ ಪರ ಭರ್ಜರಿ ಕ್ಯಾಂಪೇನ್ ನಡೆಸಿದ್ರು. ಇದೇ ಸಂದರ್ಭದಲ್ಲಿ ಸುಮಾರು 80  ಜೆಸಿಬಿಗಳ ಮೂಲಕ ಹೂವಿನ ಮಳೆಗರೆದು ಬೃಹತ್ ರ್ಯಾಲಿ ನಡೆಸಿದ ಕಾರ್ಯಕರ್ತರು, 5 ಕ್ವಿಂಟಾಲ್ ನ ಬೃಹತ್ ಸೇಬಿನ ಹಾರವನ್ನು ಸಹ ಎಚ್ಡಿಕೆಗೆ ಹಾಕಲಾಯಿತು. ಸಮಾವೇಶದಲ್ಲಿ ಸುಮಾರು 50 ಸಾವಿರ ಜನರು ಭಾಗವಹಿಸಿದ್ರು.

ರೋಡ್ ಷೋ ಬಳಿಕ ಆರಂಭವಾದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಬಂಡಾಯ ನಾಯಕ ಚಲುವರಾಯಸ್ವಾಮಿ, ಜಮೀರ್ ವಿರುದ್ದ ವಾಗ್ದಾಳಿ ನಡೆಸಿದ್ರು. ಬೆಂಗಳೂರಿನ ಮೀರ್ ಸಾಧಿಕ್, ನಾಗಮಂಗಲ ದ ಮಲ್ಲಪ್ಪ ಶೆಟ್ಟಿ ಜೆಡಿಎಸ್ ಗೆ ಮೋಸ ಮಾಡಿದ್ದಾರೆ. ಪರೋಕ್ಷವಾಗಿ ಜಮೀರ್ ರನ್ನು ಮೀರ್ ಸಾಧಿಕ್, ಚಲುವರಾಯಸ್ವಾಮಿ ಯನ್ನು ಮಲ್ಲಪ್ಪ ಶೆಟ್ಟಿಗೆ ಹೋಲಿಸಿದ ಸುರೇಶ್ ಗೌಡ, ಇವರಿಂದ ಜೆಡಿಎಸ್ ಪಕ್ಷಕ್ಕೆ ಏನು ಕೊಡುಗೆ ಇದೆ. ಕ್ಷೇತ್ರದಲ್ಲಿ ಪ್ರತಿಯೊಬ್ಬ ಶಿಕ್ಷಕನನ್ನು ತನ್ನ ಸ್ವಾರ್ಥಕ್ಕೆ ಚಲುವರಾಯಸ್ವಾಮಿ ಬಳಸಿಕೊಂಡಿದ್ದಾರೆ. ಈ ಬಾರಿ ನನಗೆ ಮತ ಕೊಡಿ, ನಾನು ದೇವೇಗೌಡ, ಕುಮಾರಸ್ವಾಮಿ ಗೆ ಮೋಸ ಮಾಡಲ್ಲ. ಅಧಿಕಾರ ಮಾರಿಕೊಳ್ಳಲ್ಲ. ಗುತ್ತಿಗೆದಾರರಿಂದ ಹಣ ಲೂಟಿ ಹೊಡೆದಿದ್ದಾರೆ. ಇವತ್ತು ಜೆಡಿಎಸ್ ಕಾರ್ಯಕರ್ತರನ್ನು ಸಮಾವೇಶಕ್ಕೆ ಬಾರದಂತೆ ನಡೆದಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ನಾನು ಕಾಂಗ್ರೆಸ್ ನಲ್ಲಿದ್ದಾಗ ಸಿದ್ದರಾಮಯ್ಯ ಸಿಎಂ ಮಾಡಲು ಶ್ರಮಿಸಿದೆ‌. ಆದರೆ ಅದೇ ಸಿದ್ದರಾಮಯ್ಯ ನನ್ನ ಮೇಲೆ ಸುಳ್ಳು ಕೇಸು ಹಾಕಿಸಿದ್ರು.‌ ಚಲುವರಾಯಸ್ವಾಮಿ ಸೋಲಿಸುವುದೇ ನನ್ನ ಗುರಿ ಎಂದ್ರು.

ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್ ಪಕ್ಷಕ್ಕೆ ಮೋಸ ಮಾಡಲು ಎಂಟು ಮಂದಿಯನ್ನು ಜೊತೆಯಲ್ಲಿಟ್ಟುಕೊಂಡು ಸಿದ್ದರಾಮಯ್ಯ ಕುಮಾರಸ್ವಾಮಿ ಗೆ ನೋವು ಕೊಟ್ಟಿದ್ದಾರೆ. ಇಷ್ಟು ವಯಸ್ಸಾದರೂ ನಾನು ಜನರ ಮದ್ಯ ಬರಲು ಜನರೇ ಕಾರಣ.

ಸಿದ್ದರಾಮಯ್ಯ ಹಾಸನಕ್ಕೆ ಬಂದು ದೇವೇಗೌಡರ ರಾಜಕೀಯ ವಂಶವನ್ನು ಕಿತ್ತೊಗೆಯಬೇಕೆಂದು ಹೇಳ್ತಾರೆ. ಸಿದ್ದರಾಮಯ್ಯ ರನ್ನು ಡಿಸಿಎಂ‌ ಮಾಡಲು ಕುಮಾರಸ್ವಾಮಿ ಬೇಕಿತ್ತು. ಸೋನಿಯಾ ಗಾಂಧಿ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಮಾಡಲು ಸಮ್ಮತಿ ಸೂಚಿಸರಲಿಲ್ಲ.ಆಗ ಸೋನಿಯಾರನ್ನು ಒಪ್ಪಿಸಿದ್ದು ಇದೇ ಕುಮಾರಸ್ವಾಮಿ. ಎಚ್.ವಿಶ್ವನಾಥ್ ಗೆ ತಾಯಿಯಂತಹ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೆ ಹೋಗಿದ್ದೀಯಾ ಅಂತೀಯಾ, ಆದರೆ ನೀನು ನಿನ್ನ ತಾಯಿ ಜೆಡಿಎಸ್ ಬಿಟ್ಟು, ಸೋನಿಯಾ ಗಾಂಧಿಯನ್ನ ತಾಯಿ ಅಂತೀಯಾ. ನಿನಗ್ಯಾವ ನೈತಿಕತೆ ಇದೆ ಎಂದು ಏಕವಚನದಲ್ಲಿ ಸಿದ್ದರಾಮಯ್ಯ ಟೀಕಿಸಿದ ಎಚ್ಡಿಡಿ, ರಾಹುಲ್ ಬಾಯಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಂ ಎಂದು ಡಿಕೆಶಿ ಚೀಟಿ ಬರೆದು ಹೇಳಿಸ್ತಾರೆ. ಜೆಡಿಎಸ್ ಬಿ ಟೀಂ‌ ಅನ್ನೋದನ್ನ ಜನ ಹೇಳ್ಬೇಕು. ರಾಹುಲ್ ಅಲ್ಲ. ಭವಿಷ್ಯದ ಪ್ರಧಾನಿ ಬರೆದು ಕೊಟ್ಟ ಚೀಟಿ ಓದೋದು ಎಷ್ಟು ಸರಿ. ಚಲುವರಾಯಸ್ವಾಮಿ ಸೋತಾಗ ಮಂಡ್ಯ ಸಂಸದ ಪುಟ್ಟರಾಜು ಮುಂದೆ ನಿಂತು ಸಂಸತ್ ಚುನಾವಣೆಯಲ್ಲಿ ಗೆಲ್ಲಿಸಿದ್ರು. ಆದರೆ ಅದೇ ಚಲುವರಾಯಸ್ವಾಮಿ ಪುಟ್ಟರಾಜು ಸಂಸತ್ ಚುನಾವಣೆ ಗೆ ನಿಂತಾಗ ಕಾಂಗ್ರೆಸ್ ಜೊತೆ ಸೇರಿ ಸೋಲಿಸಿದ್ರು‌. ಚಲುವರಾಯಸ್ವಾಮಿ ದೇವೇಗೌಡರಿಗೆ ವಯಸ್ಸಾಯ್ತು, ಕುಮಾರಸ್ವಾಮಿ ಗೆ ಅನಾರೋಗ್ಯ. ಮುಂದೆ ನಾನೇ ರಾಜ, ಬಾಲಕೃಷ್ಣ ಮಂತ್ರಿ ಅಂತ ಚಲುವರಾಯಸ್ವಾಮಿ ಹೇಳ್ತಾರೆ. ಚಲುವರಾಯಸ್ವಾಮಿ ಯಲ್ಲಿ ಎಂತಹ ಕೀಳು ಸ್ವಭಾವವಿದೆ. ಸಾಮಾನ್ಯ ಗುತ್ತಿಗೆದಾರನನ್ನು ಕರೆತಂದು ಅಧಿಕಾರ ಕೊಟ್ಟಿದ್ದಕ್ಕೆ ಇದೇನಾ ಚಲುವರಾಯಸ್ವಾಮಿ ಕೊಟ್ಟ ಕೊಡುಗೆ ಎಂದು ಟೀಕಿಸಿದ್ರು.

ಇನ್ನು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ  ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದ್ರು. ಒಟ್ಟಾರೆ ಸಮಾವೇಶಕ್ಕೆ ಆಗಮಿಸಿದ್ದ ನಾಯಕರೆಲ್ಲರೂ ಜೆಡಿಎಸ್ ಗೆ ವಂಚಿಸಿದ ಎಂಟು ಮಂದಿಯನ್ನು ಟೀಕಿಸಲು ವೇದಿಕೆ ಮಾಡಿಕೊಂಡ್ರು.

ವರದಿ: ಡಿ.ಶಶಿಕುಮಾರ್, ಬಿಟಿವಿ ನ್ಯೂಸ್, ಮಂಡ್ಯ.