ಗುಜರಾತ್ ಚುನಾವಣೆಗೆ ದಿನಗಣನೆ ! ಗ್ರೌಂಡ್ ರಿಪೋರ್ಟ್ ನಿಮ್ಮ ಬಿಟಿವಿಯಲ್ಲಿ !!

ಗುಜರಾತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 9 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಇಡೀ ಗುಜರಾತ್ ರಾಜಕೀಯ ಚಿತ್ರಣವನ್ನು ಇನ್ನು ಮುಂದೆ ಬಿಟಿವಿ ನಿಮ್ಮ ಮುಂದೆ ತೆರೆದಿಡಲಿದೆ.

ಡಿಸೆಂಬರ್ 9 ರಂದು ಮೊದಲ ಹಂತದ ಚುನಾವಣೆ, ಡಿಸೆಂಬರ್ 14 ರಂದು ಎರಡನೇ ಹಂತದ ಚುನಾವಣೆ ಗುಜರಾತ್ ನಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಎರಡೂ ರಾಜಕೀಯ ಪಕ್ಷಗಳು ಮೊದಲ ಹಂತದ ಚುನಾವಣೆ ನಡೆಯುವ ಜಿಲ್ಲೆಗಳತ್ತಾ ಗಮನವಿರಿಸಿದೆ. ನಿನ್ನೆ ಸುರೇಂದ್ರನಗರ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ‌್ಯಾಲಿ ನಡೆಸಿದರು. ಡಿಸೆಂಬರ್ 06 ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೂರತ್ ನಲ್ಲಿ ಬೃಹತ್ ಚುನಾವಣಾ ರ‌್ಯಾಲಿ ನಡೆಸಲಿದ್ದಾರೆ.

ಮತ್ತೊಂದೆಡೆ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಹಾರ್ಧಿಕ್ ಪಟೇಲ್ ನೇತೃತ್ವದ ಚಳುವಳಿ ನಡೆಯುತ್ತಿದೆ. ಹಾರ್ಧಿಕ್ ಪಟೇಲ್ ನೇತೃತ್ವದ ಚಳುವಳಿ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ. ಪಟೇಲ್ ಚಳುವಳಿಯನ್ನು ಟೀಕಿಸಿದರೆ ಬಿಜೆಪಿ ಜೊತೆ ಇರುವ ಪಟೇಲ್ ಸಮುದಾಯ ಶಾಶ್ವತವಾಗಿ ದೂರವಾಗುತ್ತದೆ. ಹಾಗಂತ ಚಳುವಳಿ ಬೆಳೆಸಿದರೆ ಬಿಜೆಪಿಗೆ ತೊಂದರೆಯಾಗುತ್ತದೆ. ದಿನೇ ದಿನೇ ಪಟೇಲ್ ಮೀಸಲಾತಿ ಚಳುವಳಿಗೆ ಜನ ಬೆಂಬಲ ಹೆಚ್ಚುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ನಿದ್ದೆಗೆಡಿಸಿರೋದಂತೂ ಸುಳ್ಳಲ್ಲ.

 

ಪ್ರಧಾನಿ ನರೇಂದ್ರ ಮೋದಿ ಅಭಿವೃದ್ದಿಯ ಅಜೆಂಡಾವನ್ನು ಮುಂದಿಟ್ಟುಕೊಂಡ ಮತ ಕೇಳುತ್ತಿದ್ದಾರೆ. ಗುಜರಾತ್ ಭೂಕಂಪದ ಬಳಿಕ ಇಡೀ ಗುಜರಾತ್ ಅನ್ನು ಕಟ್ಟಲು ಪಟ್ಟಿರೋ ಕಷ್ಟ ಮತ್ತು ಹೊಸ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಅದರ ಜೊತೆಗೆ ತಾನು ಗುಜರಾತಿನ ಮಗ ಎಂಬುದನ್ನೂ ಭಾವನಾತ್ಮಕವಾಗಿ ಬಳಸುತ್ತಿದ್ದಾರೆ.

ಕಾಂಗ್ರೆಸ್ ಕೈಯ್ಯಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿ ವಿರುದ್ದ ಹೇರಳ ಅಸ್ತ್ರಗಳಿದ್ದರೂ ಪ್ರಧಾನಿ ತವರೂರು ಎಂಬ ಭಾವನಾತ್ಮಕ ವಿಷಯವೇ ದೊಡ್ಡ ತಲೆನೋವಾಗಿದೆ. ಜಿಎಸ್ ಟಿ ಮತ್ತು ನೋಟ್ ಬ್ಯಾನ್ ನಿಂದ ಗುಜರಾತ್ ನ ವ್ಯಾಪಾರಿ ಸಮುದಾಯಕ್ಕೆ ಬಹಳಷ್ಟು ತೊಂದರೆಯಾಗಿರುವುದು ನಿಜ ಎಂದು ಜನತೆ ಹೇಳಿಕೊಂಡರೂ ಪ್ರಧಾನಿ ತವರೂರು ಎಂಬ ಕಾರಣಕ್ಕೆ ಜನ ಬಿಜೆಪಿ ಬಗ್ಗೆ ಮೃದು ಧೊರಣೆ ಹೊಂದಿದ್ದಾರೆ. ಜನರ ಈ ಮನಸ್ಥಿತಿ ಕಾಂಗ್ರೆಸ್ ಪಾಲಿಗೆ ಸವಾಲಾಗಿದೆ.

ಇನ್ನು ಮೂರು ದಿನಗಳ ಕಾಲ ಮೊದಲ ಹಂತದ ಚುನಾವಣೆ ನಡೆಯುವ ಪ್ರದೇಶದಲ್ಲಿ ಬಿಗುವಿನ ಚುನಾವಣಾ ಪ್ರಚಾರ ನಡೆಯಲಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಿಂದ ಪಕ್ಷಗಳ ನಾಯಕರು ಮೊದಲ ಹಂತದ ಚುನಾವಣೆ ನಡೆಯುವ ಜಿಲ್ಲೆಗಳತ್ತಾ ದಾಪುಗಾಲಿಕ್ಕುತ್ತಿದ್ದು ಚುನಾವಣಾ ಕಣ ರಂಗೇರಿದೆ.

ಇಂದಿನ ಗುಜರಾತ್ ಚುನಾವಣಾ ಕಣದ ಕ್ಷಣ ಕ್ಷಣದ ಅಪ್ಡೇಟ್ ನಿಮ್ಮ ಬಿಟಿವಿಯಲ್ಲಿ ಲಭ್ಯವಾಗಲಿದೆ.