ಕೇಂದ್ರ ಸರಕಾರದ ಮನವಿಯಂತೆ ರಾಷ್ಟ್ರಗೀತೆ ಕಡ್ಡಾಯ ರದ್ದುಗೊಳಿಸಿದ ಸುಪ್ರಿಂ !! ಚಿತ್ರ ಮಂದಿರದಲ್ಲಿ ಜನ-ಗಣ-ಮನ ಇನ್ನು ಕಡ್ಡಾಯವಲ್ಲ !!

ರಾಷ್ಟ್ರಗೀತೆ ಕಡ್ಡಾಯ ಮಾಡಬಾರದು ಎಂದು ಕೇಂದ್ರ ಸರಕಾರ ಮನವಿ ಮಾಡಿದ ಹಿನ್ನಲೆಯಲ್ಲಿ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆ ಮೂಲಕ ತಾನೇ ನೀಡಿದ್ದ ಆದೇಶದಿಂದ ಸುಪ್ರಿಂ ಹಿಂದೆ ಸರಿದಿದೆ.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸುವುದು ಬೇಡ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಇದರ ಬೆನ್ನಲ್ಲೇ, ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ 2016ರಲ್ಲಿ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಪರಿಷ್ಕರಿಸಿದೆ. ರಾಷ್ಟ್ರಗೀತೆ ಕಡ್ಡಾಯ ವಿಷಯಕ್ಕೆ ಸಂಬಂದಿಸಿ ವಿಧಿ, ವಿಧಾನ ರೂಪಿಸಲು 12 ಸದಸ್ಯರನ್ನೊಳಗೊಂಡ ಅಂತರ ಸಚಿವಾಲಯ ಸಮಿತಿ ರಚಿಸಲಾಗಿದೆ ಎಂದು ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ನಿನ್ನೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಹಿಂದಿನ ಆದೇಶವನ್ನು ರದ್ದುಗೊಳಿಸಿದರು.

ದೇಶಪ್ರೇಮದ ಹೆಸರಿನಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕಲು ರಾಷ್ಟ್ರಗೀತೆ ಕಡ್ಡಾಯ ಆದೇಶ ರದ್ದು ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಬಂದಿದೆ. ಸಿನೇಮಾ ಮಂದಿರಗಳಲ್ಲಿ ಮನರಂಜನೆಗಾಗಿ ಹೋಗುವ ಜನ, ರಾಷ್ಟ್ರಗೀತೆ ಬಂದಾಗ ಎದ್ದು ನಿಲ್ಲದಿದ್ದರೆ ಕೆಲ ನಕಲಿ ದೇಶಭಕ್ತಗೂಂಡಾಗಳು ಹಲ್ಲೆ ನಡೆಸಿರುವ ಪ್ರಕರಣಗಳು ಬಹಳಷ್ಟು ನಡೆದಿತ್ತು. ದಿನಕ್ಕೆ ನಾಲ್ಕೈದು ಸಿನೇಮಾ ಶೋ ನಡೆದಾಗ ಎರಡ್ಮೂರು ಸಿನೇಮಾ ನೋಡುವವನು ಅಷ್ಟೇ ಬಾರಿ ತನ್ನ ದೇಶಭಕ್ತಿಯನ್ನು ಪ್ರದರ್ಶಿಸಬೇಕಿತ್ತು.