ಧರ್ಮಸ್ಥಳ ಭಕ್ತರಿಗೆ ಇಲ್ಲಿದೆ ಸಿಹಿಸುದ್ದಿ! ಕೃಪೆ ತೋರಿ ನೀರಿನ ಬರ ನೀಗಿಸಿದ ವರುಣ!!

ಭಕ್ತರೇ ಮಂಜುನಾಥನ ದರ್ಶನಕ್ಕೆ ಚಿಂತೆ ಇಲ್ಲದೇ ಹೋಗಿ. ಹೌದು, ಮುಂಗಾರು ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದ ಪುಣ್ಯನದಿ ನೇತ್ರಾವತಿ ಭರ್ತಿಯಾಗಿದ್ದಾಳೆ. ಎರಡುದಿನಗಳ ಮಳೆ ಅಬ್ಬರಕ್ಕೆ ನೇತ್ರಾವತಿಯಲ್ಲಿ ನೀರು ತುಂಬುತ್ತಿದ್ದು, ಧರ್ಮಸ್ಥಳದ ಸ್ನಾನಘಟ್ಟ ತುಂಬಿದೆ. ಹೀಗಾಗಿ, ನೀವಿನ್ನು ನಿಶ್ಚಿಂತೆಯಿಂದ ಧರ್ಮಸ್ಥಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿ ನಿರ್ವಿಘ್ನವಾಗಿ ಮಂಜುನಾಥನ ದರ್ಶನ ಪಡೆಯಬಹುದಾಗಿದೆ.

 

ಬತ್ತಿ ಹೋಗಿದ್ದ ನೇತ್ರಾವದಿ ನದಿ ಒದೇ ಮಳೆಗೆ ತುಂಬಿರುವುದು ಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ.ಕಳೆದ ಹಲವು ದಿನಗಳಿಂದ ಧರ್ಮಸ್ಥಳದಲ್ಲಿ ಭೀಕರ ಬರ ಎದುರಾಗಿದ್ದು ನೀರಿಗೆ ಹಾಹಾಕಾರ ಉಂಟಾಗಿ ಅಡಿಕೆ, ತೆಂಗು, ಬಾಳೆ ತೋಟಗಳು ನೀರಿಲ್ಲದೆ ಒಣಗಿ ಹೋಗಿದ್ದವು. ಅಲ್ಲದೆ ನೇತ್ರಾವದಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದರಿಂದ ನೀರಿನ ಸಮಸ್ಯೆ ಉಲ್ಬಣವಾಗಿ ಭಕ್ತರು ಕ್ಷೇತ್ರ ಭೇಟಿಯನ್ನು ಮುಂದೂಡಿ ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಕರೆ ಕೊಟ್ಟಿದ್ದರು.

 

ಇದೀಗಾ ಕರಾವಳಿಯಲ್ಲಿ ವ್ಯಾಪಕವಾಗಿ ಮುಂಗಾರು ಮಳೆಯಾಗುತ್ತಿರುವುದರಿಂದ ಹಲವೆಡೆ ಮರ,ಗಿಡಗಳು ಮತ್ತು ಮನೆಗಳು ಧರೆಗುರುಳಿ ಅಪಾರ ನಷ್ಟವನ್ನು ಉಂಟುಮಾಡಿದೆ. ಅಷ್ಟೆ ಅಲ್ಲದೆ ಮಂಗಳೂರು ಸಮೀಪ ಬಲ್ಮಠ, ಉಳ್ಲಾಲ ಹತ್ತಿರ ಗುಡ್ಡ ಕುಸಿದು ಬಿದ್ದು ಮನೆಗೆ ಹಾನಿಗೀಡಾಗಿವೆ. ಅಲ್ಲದೇ ಕಡಲ ಕೊರೆತ ಕೂಡ ಹೆಚ್ಚಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ರಭಸದ ಮಳೆಸುರಿಯುತ್ತಿದ್ದು ಕಾರವಾರ ಶಿರಸಿ.ಯಲ್ಲಾಪುರ ಹಾಗೂ ಸುತ್ತಮುತ್ತ ಇದೀಗಾ ಮೋಡ ಕವಿದ ವಾತಾವರಣ ಉಂಟಾಗಿದೆ. ಅಲ್ಲದೆ ಆಗಾಗ ತುಂತುರು ಮಳೆಯಾಗುತ್ತಿದ್ದು ಅರಬ್ಬಿ ಸಮುದ್ರದದಲ್ಲಿ ಆಳೆತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಆದ್ದರಿಂದ ಸಾಂಪ್ರದಾಯಿಕ ಮೀನುಗಾರರು ಕೂಡ ಮೀನುಗಾರಿಕೆಯಿಂದ ದೂರ ಉಳಿದಿದ್ದಾರೆ.