ಈ ಊರಲ್ಲಿ ತಂಬಾಕಿಗೆ ನೋ ಎಂಟ್ರಿ! ಮದ್ಯಕ್ಕೂ ಪ್ರವೇಶವಿಲ್ಲ

ಉಡುಪಿ ಜಿಲ್ಲೆಯ ಗ್ರಾಮ ಒಂದರಲ್ಲಿ ಇದುವರೆಗೂ ಎಲ್ಲೂ ಕಾಣದ ಒಂದು ವಿಶಿಷ್ಟ ಪದ್ದತಿಯನ್ನು ಬಹಳ ವರ್ಷಗಳಿಂದ ಅನುಸರಿಸುತ್ತಿದ್ದಾರೆ. ಹೌದು ಉಡುಪಿ ಜಿಲ್ಲೆಯ ಕೋಡಿ ಎಂಬ ಗ್ರಾಮವನ್ನು ಸಜ್ಜನ ಗ್ರಾಮವನ್ನಾಗಿಸಲು ಇಲ್ಲಿನ ಜನತೆಯೇ ಸ್ವತಃ ತಾವೇ ಒಂದು ಮಾದರಿ ಸಂಕಲ್ಪವನ್ನು ಮಾಡಿಕೊಂಡಿದ್ದಾರೆ.

ad

ಈ ಗ್ರಾಮದಲ್ಲಿ ಸರ್ಕಾರವಾಗಲಿ, ಆರೋಗ್ಯ ಇಲಾಖೆಯಾಗಲಿ ಮದ್ಯಪಾನವನ್ನು, ತಂಬಾಕನ್ನು ನಿಷೇದಿಸಿಲ್ಲ ಆದರೂ ಇಲ್ಲಿನ ಜನರು 22 ವರ್ಷಗಳಿಂದ ಸ್ವಯಂಪ್ರೇರಿತರಾಗಿ ವಿವಾಹ ಪೂರ್ವದ ಮೆಹಂದಿ ಕಾರ್ಯಕ್ರಮಕ್ಕೆ ಮದ್ಯ-ಮಾಂಸ ನಿಷೇಧಿಸುವ ಜತೆಗೆ ತಂಬಾಕು ಮುಕ್ತ ಪ್ರದೇಶವನ್ನಾಗಿಸುವ ಮೂಲಕ ಆದರ್ಶಪ್ರಾಯರಾಗಿದ್ದಾರೆ.

ಕೋಡಿಬೆಂಗ್ರೆ ಪಡುತೋನ್ಸೆ ಗ್ರಾಮಕ್ಕೆ ಸೇರಿದ್ದು, ಕೋಡಿ ಗ್ರಾಮದ ಒಂದು ಸಣ್ಣ ಭಾಗವಾಗಿದೆ. ಈ ಗ್ರಾಮದ ಎರಡು ಬದಿ ನದಿ ಹರಿದರೆ, ಇನ್ನೊಂದು ಬದಿ ಸಮುದ್ರವಿದೆ. ಇಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು, ಶೇ.70ರಷ್ಟು ಮೊಗವೀರರು ಸೇರಿದಂತೆ ಬಿಲ್ಲವ, ಖಾರ್ವಿ, ಮುಸ್ಲಿಂ ಸಮುದಾಯದ ಮಂದಿ ಇಲ್ಲಿ ಅನ್ಯೋನ್ಯತೆಯಿಂದ ವಾಸಿಸುತ್ತಿದ್ದಾರೆ. 22 ವರ್ಷ ಹಿಂದೆ ಇಲ್ಲಿ ಮದುವೆಗಿಂತ ಮೆಹಂದಿಗೆ ಅದ್ದೂರಿಯಾಗಿ ಖರ್ಚು ಮಾಡಿ ಔತಣದ ಜೊತೆಗೆ ಮದ್ಯ ಕೌಂಟರ್, ಅಬ್ಬರದ ಡಿಜೆಗೆ ಬೆಳಗ್ಗಿನವರೆಗೆ ಯುವಕರ ನೃತ್ಯ ವೈಭವಗಳ ಜೊತೆಗೆ ಯುವ ಜನತೆ ಮದ್ಯ ಮತ್ತು ತಂಬಾಕಿನ ಚಟಕ್ಕೆ ಒಳಗಾಗಿದ್ದರು, ಯುವಜನತೆಯ ಮದ್ಯಪಾನದ ಚಟಕ್ಕೆ ಒಳಗಾಗುವುದಕ್ಕೆ ಕಾರಣ ಮೆಹಂದಿ ಕಾರ್ಯಕ್ರಮವೇ ಎಂದು ತಿಳಿದ ಜನರು ಇದಕ್ಕೆಲ್ಲ ಕಡಿವಾಣ ಹಾಕಲೇ ಬೇಕೆಂದು ಒಗ್ಗಟ್ಟಾಗಿ ಒಂದು ಮಹತ್ವದ ನಿರ್ಣಯ ಕೈ ಗೊಂಡರು. ಈ ನಿರ್ಧಾರಕ್ಕೆ ಯಾರು ಆಕ್ಷೇಪ ವ್ಯಕ್ತಪಡಿಸದೆ ಈ ತಂಬಾಕು ಮಧ್ಯ ನಿಷೇಧ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

ಅಂದಿನಿಂದ ಈ ಕೋಡಿ ಗ್ರಾಮದಲ್ಲಿ ಯಾವ ಅಂಗಡಿ, ಹೋಟೆಲ್‌ನಲ್ಲೂ ತಂಬಾಕು, ಸಿಗರೇಟು ಮಾರಾಟ ಮಾಡುವುದಿಲ್ಲ. ಬೀಡಿ, ಗುಟ್ಖಾ,ಐಟಮ್ ಗಳ ಮಾರಾಟ ನಿಷೇಧಿಸಲಾಗಿದೆ. ಸ್ವತಃ ವ್ಯಾಪಾರಸ್ಥರೇ ಸ್ವಯಂ ಪ್ರೇರಿತರಾಗಿ ತಂಬಾಕು, ಗುಟ್ಖಾ ಮಾರಾಟವನ್ನು ಕೈಬಿಟ್ಟಿದ್ದಾರೆ. ಇನ್ನು ಊರಿನಲ್ಲಿ ಬಾರ್, ವೈನ್‌ಶಾಪ್ ಅಂಗಡಿಗಳು ಸಹ ಇಲ್ಲ ಎಂಬುವುದು ಇನ್ನೊಂದು ವಿಶೇಷವಾಗಿದೆ.

22 ವರ್ಷದಿಂದ ತಂಬಾಕು ಮಾರಾಟ ಮಾಡಲಾಗುತ್ತಿಲ್ಲ ಎಂದರೆ ಅಚ್ಚರಿ ಪಡುವಂತಹ ವಿಷಯವೇ ಆಗಿದೆ. ಆದರೂ ಈ ಗ್ರಾಮಕ್ಕೆ ಶಹಬ್ಬಾಸ್ ಎನ್ನುವುದರಲ್ಲಿ ಒಂದು ಮಾತಿಲ್ಲ. ಒಟ್ಟಾರೆಯಾಗಿ ಯುವ ಜನತೆ, ವಿದ್ಯಾರ್ಥಿಗಳು ತಂಬಾಕು, ಗುಟ್ಖಾಕ್ಕೆ ದಾಸರಾಗುವುದನ್ನು ತಡೆಯುವ ಉದ್ದೇಶದ ಸಲುವಾಗಿ ಒಗ್ಗಟ್ಟಿನಿಂದ ಮಾಡಿದ ತಂಬಾಕು, ಮಧ್ಯ ನಿಷೇಧ ಕಾರ್ಯಕ್ರಮ ಇಡೀ ದೇಶಕ್ಕೆ ಕೋಡಿ ಗ್ರಾಮ ಮಾದರಿಯಾಗಿದೆ.