ಬಿಜೆಪಿ ಕಚೇರಿ ಮುಂದೆ ಇಂಜಿನಿಯರಿಂಗ್ ಪಕೋಡ, ಬಿಎ, ಬಿಕಾಂ ಪಕೋಡಾ !! ಸರ್ಟಿಫೈಡ್ ಬೈ ಪಿಎಂ ನರೇಂದ್ರ ಮೋದಿ !!

"No Job No Vote "Organization Protest Against PM Modi

 ಇಂದು ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿ ಎದುರು ದಿಡೀರನೆ ಪಕೋಡಾ ಅಂಗಡಿ ತೆರೆದುಕೊಂಡಿತ್ತು.

 

ಬಿಜೆಪಿ ಕಚೇರಿ ಒಳಗೆ ಸಿಎಂ ಸಿದ್ದರಾಮಯ್ಯ ವಿರುದ್ದ ಸಂಸದೆ ಶೋಭಾ ಕರಂದ್ಲಾಜೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದರೆ, ಹೊರಗಡೆ ಮೋದಿ ಪಕೋಡಾ, ಎಂಬಿಎ ಪಕೋಡಾ, ಬಿಎ ಪಕೋಡಾ ಎಂದು ಜೋರಾದ ದ್ವನಿಯಲ್ಲಿ ಪಕೋಡಾ ವ್ಯಾಪಾರ ನಡೆಯುತ್ತಿತ್ತು. ಈ ರೀತಿಯ ಪಕೋಡಾ ಪ್ರತಿಭಟನೆಗೆ ಕಾರಣವಾಗಿರೋದು ಪ್ರಧಾನಿ ಮೋದಿಯವರ ಪಕೋಡ ಅಂಗಡಿ ಎಂಬ ಸ್ವ ಉದ್ಯೋಗದ ಬಗೆಗಿನ ಬೇಜವಾಬ್ದಾರಿ ಹೇಳಿಕೆ. ಮೋದಿಯವರು ಪಕೋಡಾ ವೃತ್ತಿಯ ಘನತೆಯ ಕುರಿತು ಮಾತನಾಡಿರುವುದಲ್ಲ.
ಅವರು ಪಕೋಡಾ ಮಾರುವವರ ಬದುಕನ್ನೂ ಆಡಿಕೊಂಡಿದ್ದಾರೆ. ಚುನಾವಣೆಗೆ ಮುಂಚೆ, ನಿಮ್ಮ ಪ್ರತಿಭೆಗೆ ತಕ್ಕ ಉದ್ಯೋಗ ಸಿಗಬೇಕೋ ಇಲ್ಲವೋ? ಹೇಳಿ. ಹೇಳಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಸಿಗಬೇಕೋ ಬೇಡವೋ ಹೇಳಿ ಎಂದು ಅಬ್ಬರಿಸುತ್ತಿದ್ದ ಪ್ರಧಾನಿ ಮೋದಿ ಈಗ ಪಕೋಡಾ ಮಾರಿ ದಿನಕ್ಕೆ 200 ರೂ ಸಂಪಾದಿಸುವುದು ಉದ್ಯೋಗ ಹೌದೋ ಅಲ್ಲವೋ ಹೇಳಿ ಎಂದು ಹೌದೆನ್ನಲು ಒತ್ತಾಯಿಸುತ್ತಾರೆ.

 

 

ದೆಹಲಿಯಲ್ಲಿ ಕನಿಷ್ಠ ವೇತನ ಎಷ್ಟಿದೆ, ಕುಟುಂಬವೊಂದು ‘ಸುಮ್ಮನೇ ಬದುಕಿರಲು’ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಇವರೆಂದಾದರೂ ಯೋಚಿಸಿದ್ದಾರಾ?
ಕನಿಷ್ಠ ವೇತನವೂ ಬದುಕುವ ವೇತನವಾಗಿಲ್ಲ. ಬದುಕುವ ವೇತನ ಖಾತರಿ ಪಡಿಸಬೇಕೆಂದು ಸಂವಿಧಾನದ ಕಲಂ 43 ಹೇಳುತ್ತದೆ. ಸಂವಿಧಾನದ ಆಶಯಗಳನ್ನೂ ಮೀರಿಸಿ ಭಾರತವನ್ನು ಸೂಪರ್ ಪವರ್ ಮಾಡುತ್ತೇವೆ, ಭಾರತವನ್ನು ಪ್ರಪಂಚದ ಸ್ಕಿಲ್ ರಾಜಧಾನಿ ಮಾಡುತ್ತೇವೆ, ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಹೇಳಿದವರು, ಇರುವ ಉದ್ಯೋಗಗಳನ್ನೇ ಕಡಿಮೆ ಮಾಡಿದ್ದಾರೆ. ನಾವೆಂತಹ ದೇಶದಲ್ಲಿದ್ದೇವೆ. ನಿರುದ್ಯೋಗಿ ಯುವಜನರು ಹತಾಶೆಯಲ್ಲಿರುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಚಾನೆಲ್‍ವೊಂದರ ಸಂದರ್ಶನದಲ್ಲಿ ನಾನ್‍ಸೆನ್ಸ್ ಮಾತಾಡಬಹುದೇ? ಎಂದು ಆರೋಪಿಸಿ ಉದ್ಯೋಗಕ್ಕಾಗಿ ಯುವ ಜನರು ಸಂಘಟನೆಯ ಈ ಪಕೋಡ ಅಂಗಡಿ ಪ್ರತಿಭಟನೆಯನ್ನು ಆಯೋಜಿಸಿತ್ತು.

 

 

ಪ್ರಧಾನಿ ಮೋದಿಯವರು ರಸ್ತೆ ಬದಿಯಲ್ಲಿ ಸ್ಟೌ ಇಟ್ಟುಕೊಂಡು ಪಕೋಡಾ ತಯಾರಿಸುವ ನಿರುದ್ಯೋಗಿ ಅಸಹಾಯಕ ಯುವಕರನ್ನು ವ್ಯಂಗ್ಯ ಮಾಡುತ್ತಿದ್ದಾರೆ. ಕೃಷಿ ಮಾಡುವುದು ಉದ್ಯೋಗ ಅಲ್ಲವೇ ಎಂದು ಕೇಳುವ ಪ್ರಧಾನಿಗಳು, ಚುನಾವಣೆಗೆ ಮುಂಚೆ ರೈತರ ಆದಾಯ ಡಬಲ್ ಮಾಡ್ತೀವಿ ಎಂದು ಹೇಳಿ, ನಂತರ ಅವರ ದುಡಿಮೆಯ ಗಳಿಕೆ ಮತ್ತಷ್ಟು ಧ್ವಂಸವಾಗುವಂತೆ ನೀತಿ ರೂಪಿಸುತ್ತಾರೆ.
ಆದರೂ ಚಾನೆಲ್‍ನಲ್ಲಿ ಕೂತು ಇಷ್ಟು ರಾಜಾರೋಷವಾಗಿ ಕೃಷಿ ಉದ್ಯೋಗ ಅಲ್ಲವಾ, ಪಕೋಡಾ ಮಾರುವುದು ಉದ್ಯೋಗ ಅಲ್ಲವಾ ಎನ್ನುತ್ತಾರೆ. ಇವರು ನಮ್ಮನ್ನು ಕುರಿಗಳಿಗಿಂತಲೂ ಕಡಿಮೆ ಮಾಡಿಕೊಂಡಿದ್ದಾರೆ. ಇದನ್ನು ಸಹಿಸಲಾಗದು. ತಮ್ಮದೇ ಸರ್ಕಾರದ ಇಲಾಖೆಯ ಅಂಕಿಅಂಶಗಳು ನಿರುದ್ಯೋಗ ಹೆಚ್ಚಾಗುತ್ತಿರುವುದನ್ನು ಎತ್ತಿ ತೋರಿಸುತ್ತಿದ್ದಂತೆ, ಪ್ರಧಾನಿಯೊಬ್ಬರು ಖಾಸಗಿ ವ್ಯಕ್ತಿಗಳ ‘ಕಲ್ಪಿತ ವರದಿ’ಯ ಮೊರೆ ಹೋಗುವುದಕ್ಕಿಂತ ದುಸ್ಥಿತಿ ಇನ್ನೊಂದಿದೆಯೇ? ಎಂದು ಪ್ರತಿಭಟನೆ ಹಮ್ಮಿಕೊಂಡಿದ್ದ ಯುವಕರು ಪ್ರಶ್ನಿಸಿದರು.

 

 

ಫೆಬ್ರವರಿ 4ರಂದು ಬೆಂಗಳೂರಿಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ನಾವು ಭೇಟಿಯಾಗಿ ನಮ್ಮ ವಿಚಾರವನ್ನು ಮುಂದಿಡುತ್ತೇವೆ. ನಿಜಕ್ಕೂ ಉದ್ಯೋಗ ಸೃಷ್ಟಿ ಮಾಡುವುದು ಹೇಗೆಂಬ ಕುರಿತ ನಮ್ಮ ಯುವ ಪ್ರಣಾಳಿಕೆ ಯ ಕರಡನ್ನು ಅವರಿಗೆ ಕೊಡುತ್ತೇವೆ ಎಂದು ಪಕೋಡ ಪ್ರತಿಭಟನೆ ನಡೆಸಿರುವ ಉದ್ಯೋಗಕ್ಕಾಗಿ ಯುವಜನರು ಸಂಘಟನೆಯ ಮುತ್ತುರಾಜ್ ಹೇಳಿದರು. ಪ್ರತಿಭಟನೆಯಲ್ಲಿ ಲೇಖಕ ಶ್ರೀಪಾದ ಭಟ್,

ಹೋರಾಟಗಾರರಾಗಿರುವ ಡಾ ಎಚ್ ವ  ವಾಸು, ಸರೋವರ್ ಬೆಂಕಿಕೆರೆ, ಜ್ಯೋತಿ ಇಟ್ನಾಳ್ ಮತ್ತಿತರರು ಉಪಸ್ಥಿತರಿದ್ದರು.