ಕಟ್ಟಿದ ಒಂದು ವರ್ಷಕ್ಕೇ ಸೋರುತ್ತಿದೆ ಈ ಕಾಲೇಜ್ ಕಟ್ಟಡ. ಇದಕ್ಕೆ ಕಾರಣರ್ಯಾರು?

ಅದು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಎಂಜಿನಿಯರಿಂಗ್ ಕಾಲೇಜು ಕಟ್ಟಡ. ಕಟ್ಟಡ ನಿರ್ಮಾಣವಾಗಿ ನಾಲ್ಕು ವರ್ಷಗಳ ಬಳಿಕ ಕಾಲೇಜನ್ನು ಸ್ಥಳಾಂತರಿಸಿದ್ದು ಇದೀಗ ನೂತನ ಕಟ್ಟಡದಲ್ಲಿ ಕಾಲೇಜು ಪ್ರಾರಂಭವಾಗಿದೆ. ಆದ್ರೆ ಕಾಲೇಜು ಪ್ರಾರಂಭವಾಗಿ ಒಂದು ವರ್ಷ ಕಳೆಯುವುದರೊಳಗೇ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡ ಮಳೆಯಿಂದಾಗಿ ಸೋರುತ್ತಿದೆ. ಆದ್ರೆ ಕಟ್ಟಡ ನಿರ್ಮಾಣ ಮಾಡಿದ್ದ ಸಂಸ್ಥೆ ಮಾತ್ರ ತರಾತುರಿಯಲ್ಲಿ ಕಾಲೇಜನ್ನ ತಾಂತ್ರಿಕ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಿದೆ ಎನ್ನುವ ಆರೋಪಗಳು ಇದೀಗ ಕೇಳಿಬಂದಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ad


 

    

ಒಂದೆಡೆ ನೂತನ ಕಾಲೇಜು ಕಟ್ಟಡದಲ್ಲಿ ಎಲ್ಲೆಂದರಲ್ಲಿ ನೀರು ಸೋರಿಕೆಯಾಗಿರುವುದು, ಇನ್ನೊಂದೆಡೆ ವಿದ್ಯುತ್ ಉಪಕರಣಗಳಿರುವ ಕೊಠಡಿಯಲ್ಲೇ ನೀರು ತುಂಬಿಕೊಂಡಿರುವುದು. ಮತ್ತೊಂದೆಡೆ ಪಾಳು ಬಿದ್ದ ಕಟ್ಟಡದಂತಾಗಿರುವ ಕಾಲೇಜಿನಲ್ಲೇ ಪಾಠ ಕಲಿಯುತ್ತಿರುವ ವಿದ್ಯಾರ್ಥಿಗಳು. ಈ ದೃಶ್ಯ ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದಲ್ಲಿ. ತಾಲ್ಲೂಕಿನ ಮಾಜಾಳಿ ಗ್ರಾಮದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡಕ್ಕೆ ಕಳೆದ ವರ್ಷವಷ್ಟೇ ಕಾಲೇಜು ಸ್ಥಳಾಂತರಗೊಂಡಿದ್ದು ಒಂದೇ ವರ್ಷದಲ್ಲೇ ನೂತನ ಕಟ್ಟಡ ಮಳೆಗಾಲದಲ್ಲಿ ಸೋರುವಂತಾಗಿದೆ.

ಮಾಜಾಳಿ ಗ್ರಾಮದ ಹೊರವಲಯದಲ್ಲಿ 2013ರಲ್ಲಿ ರೈಟ್ಸ್ ಸಂಸ್ಥೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯವನ್ನ ಕೈಗೊಂಡಿದ್ದು ಆಮೆಗತಿಯಲ್ಲಿ ಸಾಗಿದ್ದ ಕಾಮಗಾರಿ ಕಳೆದ ವರ್ಷ ಪೂರ್ಣಗೊಂಡಿತ್ತು. ಬಳಿಕ ನಗರದ ಡಿಪ್ಲೋಮಾ ಕಾಲೇಜಿನಲ್ಲಿ ನಡೆಯುತ್ತಿದ್ದ ಎಂಜಿನಿಯರಿಂಗ್ ತರಗತಿಗಳನ್ನ ಕಳೆದ ವರ್ಷವೇ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಆದ್ರೆ ಕಾಲೇಜು ಪ್ರಾರಂಭವಾಗಿ ಒಂದು ವರ್ಷ ಕಳೆಯುವುದರೊಳಗೇ ನೂತನ ಕಟ್ಟಡ ಮಳೆಯಿಂದಾಗಿ ಸೋರುತ್ತಿದೆ. ಕಾಲೇಜಿಗೆ ವಿದ್ಯುತ್ ಸಂಪರ್ಕ ಒದಗಿಸುವ ಮುಖ್ಯ ಕೊಠಡಿ ಸೇರಿದಂತೆ ಎಲೆಕ್ಟ್ರಾನಿಕ್ಸ್, ಸಿವಿಲ್ ವಿಭಾಗದ ಕೆಲವು ಕೊಠಡಿಗಳೂ ಮಳೆಗೆ ಸೋರುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಮುಖ್ಯವಾಗಿ ಇಡೀ ಕಟ್ಟಡಕ್ಕೆ ವಿದ್ಯುತ್ ಪೂರೈಸುವ ಕಟ್ಟದಲ್ಲಿ ಮಳೆಯ ನೀರು ಸೋರುತ್ತಿದ್ದು ಲಕ್ಷಾಂತರ ರೂಪಾಯಿ ವೆಚ್ಚದ ವಿದ್ಯುತ್ ಉಪಕರಣಗಳಿಗೆ ಮಳೆಯ ನೀರಿನಿಂದಾಗಿ ಹಾನಿಯುಂಟಾಗುತ್ತಿದೆ.

ಇನ್ನು ಕಾಲೇಜಿನ ಮುಖ್ಯ ವಿದ್ಯುತ್ ಪೂರೈಕೆ ಕೊಠಡಿಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆಯ ನೀರು ನಿಂತುಕೊಂಡಿದ್ದು ವಿದ್ಯುತ್ ಉಪಕರಣಗಳಿಗೆ ಸಹ ಮಳೆಯ ನೀರು ತಾಗುತ್ತಿದೆ. ಇಡೀ ಕಟ್ಟಡಕ್ಕೆ ಇಲ್ಲಿಂದಲೇ ವಿದ್ಯುತ್ ಸಂಪರ್ಕ ನೀಡಿದ್ದು 700 ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಕಟ್ಟಡದಲ್ಲಿ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಯಾರು ಹೊಣೆ ಅನ್ನೋದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ. ಇನ್ನು ಈ ವಿಚಾರವಾಗಿ ಪ್ರಾಂಶುಪಾಲರನ್ನ ಕೇಳಿದ್ರೆ ವಿದ್ಯಾರ್ಥಿಯಾಗಿರುವ ನೀವು ವಿದ್ಯಾರ್ಥಿಯಂತೆ ವರ್ತಿಸಿ. ಕಾಲೇಜಿನ ಕಟ್ಟಡದ ವಿಚಾರಕ್ಕೆ ಬರುವ ಅಗತ್ಯವಿಲ್ಲ ಅಂತಾ ನಿರ್ಲಕ್ಷ್ಯದ ಮಾತುಗಳನ್ನಾಡುತ್ತಾರೆ ಅನ್ನೋದು ವಿದ್ಯಾರ್ಥಿಗಳ ಆರೋಪ.
ಇನ್ನು ಕಾಲೇಜು ಕಟ್ಟಡ ಆವರಣದಲ್ಲಿ ಟೆಂಡರ್ ಕರೆಯದೇ ಖಾಸಗಿ ಕ್ಯಾಂಟೀನ್ ನಡೆಸಲು ಸಹ ಅನುಮತಿ ನೀಡಿದ್ದು ಕಾಲೇಜಿನಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಅನ್ನೋ ಆರೋಪಗಳೂ ಕೇಳಿಬಂದಿವೆ. ಆದ್ರೆ ಈ ಬಗ್ಗೆ ಪ್ರಾಂಶುಪಾಲರನ್ನ ಕೇಳಿದ್ರೆ ಕಟ್ಟಡ ವಿಚಾರವಾಗಿ ಈಗಾಗಲೇ ರೈಟ್ಸ್ ಸಂಸ್ಥೆಯವರ ಗಮನಕ್ಕೆ ತಂದಿದ್ದು ಸದ್ಯದಲ್ಲೇ ಅದನ್ನ ಸರಿಪಡಿಸಲಾಗುವುದು. ಒಂದು ವರ್ಷದವರೆಗೆ ಅವರದೇ ಕಡೆಯಿಂದ ನಿರ್ವಹಣೆ ಸಹ ಇರುವುದರಿಂದ ಯಾವುದೇ ಸಮಸ್ಯೆ ಇಲ್ಲ.

ಒಟ್ಟಾರೇ ಪ್ರಾರಂಭಕ್ಕೂ ಮೊದಲೇ ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದ ಕಾರವಾರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭವಾದ ಒಂದು ವರ್ಷದೊಳಗೇ ಸಮಸ್ಯೆಗಳಿಗೆ ಸಿಲುಕಿರುವುದಂತೂ ಸತ್ಯ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಗಮನಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಿ ಅನ್ನೋದೇ ನಮ್ಮ ಆಶಯ….