ಚಕ್ಕುಲಿಗೆ ಮಗು ಬಲಿ.

ಮಕ್ಕಳನ್ನು ನೋಡಿಕೊಳ್ಳುವ ಅಮ್ಮಂದಿರು ಎಷ್ಟು ಕಾಳಜಿ ವಹಿಸಿದರೂ ಸಾಲದು. ಒಂದೇ ಕ್ಷಣದಲ್ಲಿ ತಿನ್ನುವ ಆಹಾರವೇ ಮುದ್ದು ಮಕ್ಕಳ ಪಾಲಿಗೆ ಯಮನಾಗಿ ಪರಿಣಮಿಸಬಹುದು. ಮಂಗಳೂರಿನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಚಕ್ಕುಲಿ ತಿನ್ನುವ ವೇಳೆ ಮಗುವೊಂದು ಉಸಿರುಗಟ್ಟಿ ಸಾವನ್ನಪ್ಪಿದೆ.

ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ಒಂದು ವರ್ಷದ ಮಗು ಆರುಷ್​ ಮೃತ ದುರ್ದೈವಿ. ಇಡ್ಯಾಮನೆ ನಿವಾಸಿ ವಿಠ್ಠಲ್ ಎಂಬುವವರ ಪುತ್ರ ನಿನ್ನೆ ಮನೆಯಲ್ಲಿ ಚಕ್ಕುಲಿ ತಿನ್ನುತ್ತಿದ್ದ. ಈ ವೇಳೆ ಚಕ್ಕುಲಿ ಚೂರೂಂದು ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದೆ.

ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಮುದ್ದಾದ ಮಗು ಮನೆಯಂಗಳದಲ್ಲೇ ಚಕ್ಕುಲಿ ತಿನ್ನುವ ವೇಳೆ ಸಾವನ್ನಪ್ಪಿದ್ದು, ಕುಟುಂಬಸ್ಥರ ದುಃಖ ಮುಗಿಲುಮುಟ್ಟಿದೆ. ಯಾವುದಕ್ಕು ನೀವು ನಿಮ್ಮ ಮಕ್ಕಳಿಗೆ ತಿಂಡಿ ತಿನ್ನಿಸುವ ವೇಳೆ ಹುಶಾರಾಗಿರಿ.