ಸಿದ್ದರಾಮಯ್ಯ ನಿದ್ದೆಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ !! ಬಳ್ಳಾರಿಗೆ ಕೆಟ್ಟ ಹೆಸರು ಬರಲು ಕಾಂಗ್ರೆಸ್ ಕಾರಣ !!

ವಾಲ್ಮೀಕಿ ಮಹರ್ಷಿ ನಡೆದಾಡಿದ ಪವಿತ್ರ ಭೂಮಿ ಬಳ್ಳಾರಿಗೆ ಕೆಟ್ಟ ಹೆಸರು ಬರಲು ಕಾಂಗ್ರೆಸ್ ಕಾರಣ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳ್ಳಾರಿಗೆ ಕಪ್ಪು ಚುಕ್ಕೆ ಇಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕರ್ನಾಟಕದ ಹಂಪಿ ಸೇರಿದಂತೆ ಪ್ರವಾಸೋದ್ಯಮ ಕರ್ನಾಟಕದ ಬ್ರಾಂಡ್, ಅದು ಎಲ್ಲಿ ಕಳೆದು ಹೋಯ್ತು ? ಈ ಸರ್ಕಾರ ಕರ್ನಾಟಕವನ್ನು ಸಾಲದ ಕೂಪದಲ್ಲಿ ಮುಳುಗಿಸಿದೆ. ಆದರೆ ಕಾಂಗ್ರೆಸ್ ನ ಮಂತ್ರಿಗಳ ಖಜಾನೆ ತುಂಬಿದ್ದಾದರೂ ಹೇಗೆ? ಎಂದು ಪ್ರಶ್ನಿಸಿದರು. ಸಣ್ಣ ಸಣ್ಣ ಕೆಲಸಗಳಿಗೂ ಜನಸಾಮಾನ್ಯರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಇದೆ, ಅದಕ್ಕೇ ಸೀದಾ ರುಪಯ್ಯಾ ಎಂಬ ಹೆಸರು ಬಂದಿದೆ. ಸೋನಿಯಾ ಗಾಂಧಿ ಲೋಕಸಭೆಗೆ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡಿ ಗೆದ್ದು ಏನು ಮಾಡಿದರು? ಕಳೆದ ಐದು ವರ್ಷಗಳಲ್ಲಿ ಅದಿರಿಗೆ ಸಂಬಂಧಿಸಿದ ಯಾವುದೇ ಕಾನೂನು ಮಾಡ್ಲಿಲ್ಲ, ಸುಮ್ಮನೆ ಕಾಲ ಹರಣ ಮಾಡಿದರು ಎಂದು ಮೋದಿ ಆರೋಪಿಸಿದರು.

ಬಳ್ಳಾರಿ ಜಿಲ್ಲೆಯ ಸಮಸ್ಯೆಗಳು ಹಲವು ಇಲ್ಲಿನ ನೀರಾವರಿ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆಗೆ ಸ್ಪಂದಿಸಲಿಲ್ಲ. ಕಾಂಗ್ರೆಸ್ ದಲಿತರ ವಿರೋಧಿ ಆದಿವಾಸಿಗಳ ವಿರೋಧಿ ಹಿಂದುಳಿದವರ ವಿರೋಧಿ, ಕುಟಿಲ ರಾಜಕಾರಣ ಮಾಡಿಕೊಂಡು ಬಂದಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ದಲಿತರು ಮುಸ್ಲಿಂ ರ ಹೆಸರಿನಲ್ಲಿ ರಾಜಕಾರಣ ಮಾಡುತ್ತದೆ. ಖರ್ಗೆಯವರನ್ನು ಸಿಎಂ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೇಲೆ ಗುಪ್ತ ಮತದಾನದ ಹೆಸರಿನಲ್ಲಿ ಈಗಿನ ಸಿಎಂ ಸಿದ್ದರಾಮಯ್ಯರನ್ನು ಆಯ್ಕೆ ಮಾಡಿದರು. ಖರ್ಗೆಯವರನ್ನು ಹೊರಗೆ ಕಳಿಸಿದರು ಎಂದು ಗಂಭೀರ ಆರೋಪ ಮಾಡಿದರು.

ಸಿಎಂ ಎಂಟು ಕೆರೆ ನೀರು ಕುಡಿದು ಬಂದವರು. ಬೇಕೆನಿಸಿದಾಗ ಪಕ್ಷ ಬದಲಿಸಿದ್ದಾರೆ – ಬದಲಿಸುತ್ತಾರೆ. ಸದ್ಯ ಈಗ ನಿದ್ದೆ ಮಾಡುವುದರಲ್ಲೇ ಇದ್ದಾರೆ ಎಂದೂ ವ್ಯಂಗ್ಯ ಮಾಡಿದ್ದಾರೆ. ಈ ಸಲ ನಾವು ಬಿಜೆಪಿ ಒಬ್ಬ ದಲಿತ ತಾಯಿಯ ಬಡ ಕುಟುಂಬದ ಮಗನನ್ನು ರಾಷ್ಟ್ರಪತಿ ಮಾಡಿದ್ದು ಕಾಂಗ್ರೆಸ್ ಗೆ ಹೊಟ್ಟೆ ನೋವು ಶುರು ಆಯಿತು. ಒಬ್ಬ ಚಾಯವಾಲಾ, ಹಿಂದುಳಿದ ವರ್ಗದವನ್ನ ಪ್ರಧಾನಿ ಮಾಡಿದ್ದು ಬನಿಯಾ ಬಮ್ಮನ್ ಗಳ ಪಾರ್ಟಿ ಎಂದು ಕರೆಯಲಾಗುತ್ತಿದ್ದ ಅದೇ ಬಿಜೆಪಿ ಎಂದು ಮೋದಿ ತನ್ನ ಭಾಷಣದಲ್ಲಿ ಹೇಳಿದ್ದಾರೆ.