ರೇಲ್ವೆ ಉದ್ಯೋಗಿಯ ಮೂರನೇ ಮದುವೆಯಲ್ಲಿ ನಡೆದಿದ್ದೇನು ಗೊತ್ತಾ?

ಆತ ಹೇಳಿಕೊಳ್ಳೋಕೆ ಸೆಂಟ್ರಲ್​ ಗೌರ್ಮೆಂಟ್​​ ಉದ್ಯೋಗಿ. ರೇಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೋನು ಮದುವೆಯಾಗೋದನ್ನೇ ಫುಲ್​ ಟೈಂ ಜಾಬ್​ ಮಾಡಿಕೊಂಡಿದ್ದ. ಎರಡು ಮದುವೆಯಾಗಿ ವಂಚಿಸಿದ ಭೂಪ ಮೂರನೇ ಮದುವೆಯ ಬೀಗರೌತಣದಲ್ಲಿ ಮೊದಲ ಹೆಂಡತಿಯ ಕೈಗೆ ಸಿಕ್ಕಿ ಸಖತ್ ಗೂಸಾ ತಿಂದು ಸುದ್ದಿಯಾಗಿದ್ದಾನೆ.

ಹಾಸನದ ಗೊರೊರು ಮೂಲದ ರಾಜೇಶ್ ಹೀಗೆ ತನ್ನ ಮದುವೆಯಲ್ಲೇ ಗೂಸಾ ತಿಂದ ವರ. ಹೌದು ರೇಲ್ವೆ ಇಲಾಖೆಯಲ್ಲಿ ಕೆಲಸದಲ್ಲಿದ್ದ ರಾಜೇಶ್ 2006 ರಲ್ಲಿ ಚನ್ನರಾಯಪಟ್ಟಣ ಮೂಲದ ಸೌಮ್ಯ ಎಂಬಾಕೆಯ ಜೊತೆ ವಿವಾಹವಾಗಿದ್ದ. 6 ವರ್ಷಗಳ ಕಾಲ ಪತ್ನಿ ಜೊತೆ ಅನ್ಯೋನ್ಯವಾಗಿದ್ದ ರಾಜೇಶ ಬಳಿಕ ಆಕೆಗೆ ಹೊಡೆದು-ಬಡಿದು ಹಿಂಸೆ ಮಾಡಿ ಕೌರ್ಯ ಮೆರೆದಿದ್ದ. ಅಷ್ಟೇ ಅಲ್ಲ ಮೊದಲ ಪತ್ನಿಗೆ ವಿಚ್ಛೇದನ ನೀಡಲು ನ್ಯಾಯಾಲಯದ ಮೆಟ್ಟಿಲೇರಿದ್ದ. ಈ ಮಧ್ಯೆ ನ್ಯಾಯಾಲಯದ ಇಬ್ಬರಿಗೂ ಹೊಂದಿಕೊಂಡು ಹೋಗುವಂತೆ ಸೂಚಿಸಿದ್ದ ಸಮಯದಲ್ಲೇ ಮೊದಲ ಪತ್ನಿಗೆ ಕೈಕೊಟ್ಟು ಅರಕಲಗೂಡಿನ ಮಲ್ಲಿಪಟ್ಟಣದ ಕಲಾ ಎಂಬಾಕೆಯನ್ನು ವರಿಸಿದ್ದ.

ಕೇವಲ 10 ತಿಂಗಳ ಕಾಲ ಕಲಾ ಜೊತೆ ಸಂಸಾರ ಮಾಡಿದ ರಾಜೇಶ್​ ಇದೀಗ ಅವಳಿಗೂ ಕೈಕೊಟ್ಟು ಇದೇ ನವೆಂಬರ್ 15 ರಂದು ಗೊರೊರು ಮೂಲದ ಯುವತಿಯೊಂದಿಗೆ ಮತ್ತೆ ಸಪ್ತಪದಿ ತುಳಿದಿದ್ದ. ತನ್ನ ನಿವಾಸದಲ್ಲಿ ಭೀಗರೌತಣ ಮಾಡುತ್ತಿದ್ದ ವೇಳೆ ಮೊದಲ ಪತ್ನಿ ಸೌಮ್ಯ ಹಾಗೂ ಆಕೆಯ ಸಂಬಂಧಿಕರು ಸ್ಥಳಕ್ಕೆ ತೆರಳಿ ಪ್ರಶ್ನಿಸಿದ್ದಾರೆ.
ಈ ವೇಳೆ ಅವರ ಮೇಲೆ ತಿರುಗಿ ಬಿದ್ದ ರಾಜೇಶ್ ಸೌಮ್ಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕೆರಳಿದ ಆಕೆಯ ಸಂಬಂಧಿಕರು ರಾಜೇಶ್​ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ರಸಿಕ ರಾಜೇಶ್ ಪೊಲೀಸರ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾನೆ. ಆದರೇ ರಾಜೇಶ್ ನಿಂದ ಜೀವ ಬೆದರಿಕೆ ಎಂದಿರುವ ಸೌಮ್ಯ ನನಗೆ ನ್ಯಾಯ ಹಾಗೂ ಭದ್ರತೆ ಕೊಡಿಸಬೇಕೆಂದು ಪೊಲೀಸರ ಮೊರೆ ಹೋಗಿದ್ದಾರೆ.