ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನನಗೆ ವಿಷ ನೀಡಿದ್ರೂ ಕುಡಿಯೋದಕ್ಕೆ ನಾನು‌ ಸಿದ್ದ – ಡಾ. ವಿಜಯ ಸಂಕೇಶ್ವರ

ನನಗೆ ರಾಜ್ಯ ಸಭಾ ಸ್ಥಾನ ಕೈತಪ್ಪಿದ್ದಕ್ಕೆ ಯಾವುದೇ ಅಸಮಾಧಾನವಿಲ್ಲ. ರಾಜೀವ್ ಚಂದ್ರಶೇಖರ್ ನನ್ನ ಆತ್ಮೀಯ ಸ್ನೇಹಿತ. ಅವರನ್ನ ರಾಜ್ಯ ಸಭೆಗೆ ಆಯ್ಕೆ ಮಾಡಿರೋದು ಸಂತಸ ತಂದಿದೆ. ಬಿಜೆಪಿ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದು, ಪಕ್ಷ ವಿಷ ಸೇವಿಸು ಅಂದ್ರೂ ಸೇವಿಸುತ್ತೇನೆ ಅಂತ ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಚೇರ‌್ಮನ್ ಡಾ. ವಿಜಯ ಸಂಕೇಶ್ವರ ಸ್ಪಷ್ಟಪಡಿಸಿದ್ದಾರೆ.

ad


ರಾಜೀವ್ ಚಂದ್ರಶೇಖರ ಅವರನ್ನ ರಾಜ್ಯ ಸಭೆಗೆ ಆಯ್ಕೆ ಮಾಡಿರೊ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ. ವಿಜಯ ಸಂಕೇಶ್ವರ, ರಾಜೀವ್ ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದ್ರೂ ಎಲ್ಲವನ್ನ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅವರ ತಂದೆ ಆರ್‌ಎಸ್‌ಎಸ್ ಕಟ್ಟಿದವರು. ರಾಜ್ಯಸಭೆಗೆ ರಾಜೀವ್ ಚಂದ್ರಶೇಖರ್ ಅವರ ಹೆಸರು ಅಂತಿಮಗೊಳಿಸಿದಕ್ಕೆ ನನಗೆ ಯಾವುದೇ ಬೇಜಾರಿಲ್ಲ. ಅವರ ಹೆಸರನ್ನು ಸೂಚಿಸಿದ್ದು ಸಂತೋಷವಾಗಿದೆ. ಇನ್ನು ರಾಜ್ಯಸಭೆಗೆ ಆಯ್ಕೆ ಮಾಡದಿರುವುದಕ್ಕೆ ನನಗೆ ಅಸಮಾಧಾನವಿಲ್ಲ. ನಾನೇನು ಅರ್ಜಿ ಹಾಕಿರ‌್ಲಿಲ್ಲ. ರಾಜೀವ್ ಚಂದ್ರಶೇಖರ್ ಅಪ್ಪಟ ಕನ್ನಡಿಗ ಎಂದು ಘಂಟಾಘೋಷವಾಗಿ ಹೇಳುತ್ತೇನೆ..

ಕರ್ನಾಟಕದಿಂದ ಕಾಂಗ್ರೆಸ್ ಹಠಾವೋ ಚಳುವಳಿಯನ್ನ ದೊಡ್ಡ ಪ್ರಮಾಣದಲ್ಲಿ ಮಾಡುತ್ತೇನೆ. ಮುಂಬರುದ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವುದು, ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಹೆಚ್ಚಿನ ಸಮಯ ನೀಡುತ್ತೇನೆ. ನರೇಂದ್ರ ಮೋದಿಯವರು ಅದ್ಭುತ ಪ್ರಧಾನಿ. ಕೇವಲ ಭಾರತಕ್ಕೆ ಪ್ರಧಾನಿಯಾಗದೇ ಇಡೀ ವಿಶ್ವಕ್ಕೆ ಪ್ರಧಾನಿಯಾಗಿದ್ದಾರೆ. ಅಲ್ದೆ, ವಿಶ್ವದಲ್ಲಿ ದೇಶದ ಪ್ರಭಾವ ಹೆಚ್ಚಿಸಿದ್ದಾರೆ. ರಾಜ್ಯದ ಜನರಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ. ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಹಿಂದೂಗಳಿಗೆ ಕಾಂಗ್ರೆಸ್ ಸರ್ಕಾರದಿಂದ ಬಹಳ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.

 

ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ವಿಷ ತೆಗೆದುಕೊಳ್ಳಲು ಹೇಳಿದರೂ ತೆಗೆದುಕೊಳ್ಳುತ್ತೇನೆ. ಎಲ್ಲಿ ಸ್ಪರ್ಧಿಸಲು ಹೇಳಿದರೂ ಸ್ಪರ್ಧಿಸುತ್ತೇನೆ. ಕಾಂಗ್ರೆಸ್‌ನವರು ನನಗೆ ಈಗಲೂ ಸಂಪರ್ಕ ಮಾಡುತ್ತಿದ್ದಾರೆ. ಆದ್ರೆ, ಬಿಜೆಪಿ ಹೈಕಮಾಂಡ್ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದೆ. ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಸೋನಿಯಾ ಗಾಂಧಿಯವರು ಮಾಡಿದ ತಪ್ಪು. ಗೋವಾ ಚುನಾವಣೆ ಗೆಲ್ಲಬೇಕಿತ್ತು. ಹೀಗಾಗಿ ಬೆಂಕಿ ಹಚ್ಚಿ ಹೋದರು. ಕರ್ನಾಟಕಕ್ಕೆ ಒಂದು ಹನಿ ನೀರನ್ನು ಬಿಡಲ್ಲ ಎಂದಿದ್ದರು. ಹೀಗಾಗಿ ವಿವಾದ ಬಗೆಹರಿಯುತ್ತಿಲ್ಲ. ಪ್ರಧಾನಿ ಮೋದಿಯವರು ಮತ್ತು ಅಮಿರ್ ಶಾ ಕೊಟ್ಟ ಮಾತು ಈಡೇರಿಸುವ ವಿಶ್ವಾಸವಿದೆ. ಅಂತರ್‌ರಾಜ್ಯ ಸಮಸ್ಯೆಗಳು ನಾವು ತಿಳಿದುಕೊಂಡಷ್ಟು ಸರಳವಾಗಿ ಬಗೆಹರಿಯಲ್ಲ. ಚುನಾವಣೆ ನಂತರ ಸಮಸ್ಯೆ ಬಗೆ ಹರಿಯೊ ನಂಬಿಕೆ ನನಗಿದೆ ಅಂತ ಹೇಳೀದ್ರು.

 

ಇನ್ನು ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕ ಧರ್ಮದ ವಿಚಾರವಾಗಿ ಮಾತನಾಡಿದ ಅವ್ರು, ನಾನು ಲಿಂಗಾಯತ ಪ್ರಮುಖ ಮುಖಂಡ ಎಂದು ಎಲ್ಲೂ ಹೇಳಿಕೊಳ್ಳಲ್ಲ. ಸಿದ್ದರಾಮಯ್ಯ ಜಾತಿಯನ್ನು ಬಿಂಬಿಸುತ್ತಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋದವರೆಂದು ಸಿದ್ದರಾಮಯ್ಯ ಹೇಳುತ್ತಾರೆ. ಶಶಿಕಲಾ ರೀತಿ ಇಂದಿರಾ ಗಾಂಧಿ ಕಂಬಿ ಎಣಿಸಿದ್ದರು ಸಿದ್ದರಾಮಯ್ಯ ಅದನ್ನು ನೆನಪಿಸಿಕೊಳ್ಳಬೇಕು. ಅಲ್ದೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕ್ರಿಮಿನಲ್ ಅಲ್ಲ ಅಂತ ಒತ್ತಿ ಹೇಳಿದ್ರು. ಇನ್ನು, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ನಾಗಮೋಹನ ದಾಸ್ ಸಮಿತಿ ವರದಿ ನಾನು ಒಪ್ಪಲ್ಲ. ಸಿದ್ದರಾಮಯ್ಯ ಒಬ್ಬ ನಾಟಕಕಾರ. ಮಠಾಧೀಶರಲ್ಲೂ ದುಡ್ಡಿನ ದಾಹವಿದೆ. ಕಾಂಗ್ರೆಸ್‌ನವರು ಕಪ್ಪು ಹಣ ಕೊಟ್ಟು ಕೆಲವು ಮಠಾಧೀಶರನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದ ಅವರು, ಲಿಂಗಾಯತರು ಮೀಸಲಾತಿ ಕೇಳುವುದು ಸೂಕ್ತವಲ್ಲ. ವೀರಶೈವ ಲಿಂಗಾಯತ ಸೇರಿ ಒಂದು ಪ್ರತ್ಯೇಕ ಧರ್ಮವಾಗಬೇಕು. ವೀರಶೈವ ಮತ್ತು ಲಿಂಗಾಯತ ಒಂದಾಗಬೇಕು ಎನ್ನುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಅಂದ್ರು

ರಾಜ್ಯ ಸರ್ಕಾರದ ವಿರುದ್ಧ ಡಾ. ವಿಜಯ ಸಂಕೇಶ್ವರ, ಸಿದ್ದರಾಮಯ್ಯ ಹೇಳುವುದೊಂದು ಮಾಡುವುದೊಂದು. ಯೋಜನೆ ವಿಚಾರದಲ್ಲಿ ಕಾಂಗ್ರೆಸ್‌ನವರು ನಾಟಕ ಮಾಡುತ್ತಾರೆ. ಲೋಕಾಯುಕ್ತರಿಗೆ ಚೂರಿ ಇರಿತ ವಿಚಾರ ಕೇಳಿ ನಮಗೆ ಬಹಳ ಬೇಜಾರಾಯ್ತು. ನಮ್ಮ ಕುಟುಂಬಕ್ಕೂ ಬೆದರಿಕೆಯಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದ್ದು, ಕಾನೂನು ಸು-ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ವಾಗ್ದಾಳಿ ನಡೆಸಿದರಲ್ಲದೇ, ಸಿಂ.ಎಂ. ಸಿದ್ದರಾಮಯ್ಯ ಒಳ್ಳೆ ನಾಟಕಕಾರ ಅಂತ ವ್ಯಂಗ್ಯವಾಡಿದ್ರು.

 

 

 

ವರದಿ: ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ…