ನಟ ದರ್ಶನ್ ಸಿಎಂ ಪರ ಪ್ರಚಾರದ ವಿರುದ್ದ ಪ್ರತಿಭಟನೆ ! ಗುರು ಅಂಬಿಗೇ ದ್ರೋಹ ಬಗೆದವರ ಪರ ಪ್ರಚಾರವೇ ?

 

ad


ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಮಾಡಿರುವುದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರತೊಡಗಿದ್ದು ತಾರಾ ಪ್ರಚಾರಕರು ಒಬ್ಬರಾದಂತೆ ಒಬ್ಬರು ಬಂದು ಸಿಎಂ ಪರ ಪ್ರಚಾರ ನಡೆಸುತ್ತಿದ್ದಾರೆ. ಇಂದು ನಟ ದರ್ಶನ್‌ ಅವರು ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಆಗಮಿಸಿದ್ದು, ನಾಗನಹಳ್ಳಿಯಲ್ಲಿ ಜೆಡಿಎಸ್‌ ಕಾಯಕರ್ತರು ಪ್ರತಿಭಟನೆ ನಡೆಸಿ ವಿರೋಧ ತೋರಿದ್ದಾರೆ. ಅಂಬರೀಷ್‌ ಅವರ ಸಚಿವ ಸ್ಥಾನ ಕಿತ್ತುಕೊಂಡಾಗ ಯಾಕೆ ಮಾತನಾಡಲಿಲ್ಲ, ಕಾವೇರಿ ಪರ ಹೋರಾಟ ಯಾಕೆ ಮಾಡಲಿಲ್ಲ ಎಂದು ಪ್ರತಿಭಟನಾ ನಿರತರು ದರ್ಶನ್‌ ಅವರನ್ನು ಪ್ರಶ್ನಿಸಿದ್ದಾರೆ.

ನಾಗನಹಳ್ಳಿಯಲ್ಲಿ ಸಿಎಂ ಪರ ನಟ ದರ್ಶನ್ ಮತಯಾಚಿಸುತ್ತಿದ್ದು, ಜೆಡಿಎಸ್ ಕಾರ್ಯಕರ್ತರು ಧರಣಿ ಕುಳಿತು ದರ್ಶನ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ದರ್ಶನ್ ಅಭಿಮಾನಿಗಳು ಒಂದೋ ರಾಜಕೀಯವನ್ನು ಆಯ್ಕೆ ಮಾಡಿಕೊಳ್ಳಿ ಅಥವಾ ಸಿನೇಮಾ ಆಯ್ಕೆ ಮಾಡಿಕೊಳ್ಳಿ ಎಂದು ಪಟ್ಟು ಹಿಡಿದರು. ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ದರ್ಶನ್ ವೈಯುಕ್ತಿಕವಾಗಿ ಸಂಕಷ್ಟಕ್ಕೆ ಒಳಗಾದಾಗ ನೆರವಿಗೆ ಬಂದಿದ್ದು ಅಂಬರೀಶ್. ಅಂದು ರಾತ್ರೋರಾತ್ರಿ ಬಂದಿದ್ದ ಅಂಬರೀಶ್ ದರ್ಶನ್ ರನ್ನು ರಕ್ಷಿಸಿದ್ದರು. ತನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಸ ಮಾಡಿದರು ಎಂದು ಅಂಬರೀಶ್ ಬಹಿರಂಗವಾಗಿ ಹೇಳಿಕೊಂಡ ಈ ದಿನಗಳಲ್ಲಿ ದರ್ಶನ್ ಸಿಎಂ ಪರ ಪ್ರಚಾರ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗಂತ ಸಾಮಾಜಿಕ ಜಾಲತಾಣ ಮತ್ತು ಪ್ರತಿಭಟನೆಗಳಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.