ಪುನೀತ್ ಅಭಿಮಾನಿಗಳಿಗೆ ಮತ್ತೆ ನಿರಾಸೆ- ಅಂಜನಿಪುತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ ನ್ಯಾಯಾಲಯ

ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ಅಭಿನಯದ ಬಹುನೀರಿಕ್ಷಿತ ಚಿತ್ರ ಅಂಜನಿಪುತ್ರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಸಿಟಿಸಿವಿಲ್​ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಅಸಮಧಾನಗೊಂಡಿರುವ ನ್ಯಾಯಾಲಯ ಚಿತ್ರ ಪ್ರದರ್ಶನವನ್ನು ರಾಜ್ಯದಾದ್ಯಂತ ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದಲ್ಲಿ ವಕೀಲರ ವಿರುದ್ಧ ಅವಹೇಳನಕಾರಿ ಶಬ್ದ ಬಳಸಲಾಗಿದೆ. ಹೀಗಾಗಿ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ವಕೀಲ ನಾರಾಯಣಸ್ವಾಮಿ ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಡೆ ನೀಡಿತ್ತು. ಬಳಿಕ ಅರ್ಜಿ ವಿಚಾರಣೆಯನ್ನು ಜನವರಿ 3ಕ್ಕೆ ಮುಂದೂಡಿತ್ತು.

 

ಆದರೇ ಕೋರ್ಟ್​ ಆದೇಶವಿದ್ದರೂ ಅಂಜನಿಪುತ್ರ ಚಿತ್ರ ಎಲ್ಲ ಚಿತ್ರಮಂದಿರಗಳಲ್ಲಿ ಪ್ರಸಾರವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಕೀಲ ಜಿ.ನಾರಾಯಣಸ್ವಾಮಿ ನಿರ್ಮಾಪಕ ಹಾಗೂ ನಿರ್ದೇಶಕರ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಿದ್ದರು. ಇದೀಗ ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ರಾಜ್ಯಾದ್ಯಂತ ಪ್ರದರ್ಶನಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ. ಒಟ್ಟಿನಲ್ಲಿ ಅಂಜನಿಪುತ್ರ ಚಿತ್ರ ಪ್ರದರ್ಶನ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲೇ ಇದ್ದು ಚಿತ್ರಪ್ರೇಮಿಗಳಿಗೆ ನಿರಾಸೆ ತಂದಿದೆ.