ಈ ಬಾರಿ ರಾಹುಲ್ ಗಾಂಧಿ ಎಲ್ಲೆಲ್ಲಿ ಹೋಗ್ತಾರೆ..? ಏನಿದೆ ಪ್ರವಾಸದ ರೂಪುರೇಷೆ?

ರಾಜ್ಯ ವಿಧಾನಸಭೆಗೆ ದಿನಾಂಕ ಘೋಷಣೆ ಬಳಿಕ ಮತ್ತೆ ರಾಜ್ಯ ಪ್ರವಾಸ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಏ. ನಾಲ್ಕರಂದು ಚಿತ್ರದುರ್ಗ ಜಿಲ್ಲೆಯ ಎಸ್ಸಿ ಮೀಸಲು ಕ್ಷೇತ್ರವಾದ ಹೊಳಲ್ಕೆರೆಗೆ ಆಗಮಿಸಲಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತವರು ಕ್ಷೇತ್ರವಾದ ಇಲ್ಲಿ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಭರ್ಜರಿ ಪ್ರಚಾರ ನಡೆಸಿದ್ದರು. ಅದೇ ಸ್ಥಳದಲ್ಲಿ
ರಾಹುಲ್ ಗಾಂಧಿಯವರನ್ನು ಕರೆತರುವ ಮೂಲಕ ಸಚಿವ ಆಂಜನೇಯ ತಮ್ಮನ್ನು ಸೋಲಿಸಲು ಬಿಜೆಪಿ ಹೆಣೆದಿರುವ ರಣತಂತ್ರಕ್ಕೆ ಪ್ರತಿತಂತ್ರ ಹೂಡಿದ್ದಾರೆ.

ಬೃಹತ್ ಸಮಾವೇಶ ಅಂದು ಹೊಳಲ್ಕೆರೆ ಪಟ್ಟಣದ ಕೊಟ್ರ ನಂಜಪ್ಪ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಸಿದ್ದತೆಯನ್ನು ಸಚಿವ ಆಂಜನೇಯ ವೀಕ್ಷಣೆ ಮಾಡಿದರು. 1 ಲಕ್ಷಕ್ಕೂ ಹೆಚ್ಚು ಜನರು ಈ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ಸಿ.ಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಆಗಮಿಸಲಿದ್ದಾರೆ. ಈಗಾಗಲೇ ಬಹುತೇಕ ಸಿದ್ದತೆಗಳು ಸಹಾ ಪೂರ್ಣಗೊಂಡಿದ್ದು ಬಾರಿ ಬಿಗಿ ಬಂದೋಬಸ್ತ್ ಸಹಾ ಕೈಗೊಳ್ಳಲಾಗಿದೆ.

ಐಸಿಸಿಸಿ ಅಧ್ಯಕ್ಷರಾದ ನಂತರ ಇದೇ ಪ್ರಥಮ ಬಾರಿಗೆ ರಾಹುಲ್ ಗಾಂಧಿ ಮಲೆನಾಡಿಗೆ ಎಂಟ್ರಿ ಕೊಡಲಿದ್ದಾರೆ. ನೆಚ್ಚಿನ ನಾಯಕನನ್ನು ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಸಜ್ಜಾಗಿದೆ. ನಾಳೆ ಬೆಳಿಗ್ಗೆ 11.50ಕ್ಕೆ ರಾಹುಲ್ ಗಾಂಧಿ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಎಂಟ್ರಿ ಕೊಡಲಿದ್ದಾರೆ. ಬಳಿಕ ಅಶೋಕ ಸರ್ಕಲ್​ನಿಂದ ಗೋಪಿ ವೃತ್ತದ ವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಈ ರೋಡ್​ ಶೋನಲ್ಲಿ ಸಹಸ್ರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯ ಉದ್ಘಾಟನೆ ನೆರವೇರಿಸಲಿರುವ ರಾಹುಲ್ ಗಾಂಧಿ, ಮಧ್ಯಾಹ್ನ 12.35ಕ್ಕೆ ಗೋಪಿ ಸರ್ಕಲ್​ನಲ್ಲಿ ಸಮಾವೇಶವನ್ನು ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ಸಮಾವೇಶ ಮುಗಿದ ನಂತರ ಭೋಜನ ಸೇವಿಸಿ ರಾಹುಲ್ ಗಾಂಧಿ ದಾವಣಗೆರೆ ಜಿಲ್ಲೆಗೆ ಪಯಣ ಬೆಳೆಸಲಿದ್ದಾರೆ. ರಾಹುಲ್ ಆಗಮನದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಿದೆ.