ತಾಯಿಯಿಂದ ಮಗನಿಗೆ ಶಿಫ್ಟ್ ಆದ ಅಧಿಕಾರ !

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ!!

adಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದೊಳಗೆ ನಡೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಐಸಿಸಿ ತನ್ನ ಅಧ್ಯಕ್ಷ ಹುದ್ದೆಗೆ ಪ್ರಜಾತಾಂತ್ರಿಕವಾಗಿ ಚುನಾವಣೆ ಘೊಷಣೆ ಮಾಡಿತ್ತು. ಆದರೆ ಅಧ್ಯಕ್ಷ ಹುದ್ದೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಸ್ಪರ್ಧಿಯಾಗಿದ್ದರಿಂದ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ.

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ ಘೊಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ರಾಹುಲ್ ಗಾಂಧಿ ಅಧ್ಯಕ್ಷರಾಗಿ ಆಯ್ಕೆಯಾಗಿರೋದನ್ನು ಎಐಸಿಸಿ ಅಧಿಕೃತವಾಗಿ ಟ್ವೀಟ್ ಮಾಡಿದೆ. ಸದ್ಯ ಗುಜರಾತ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ರಾತ್ರಿ ದೆಹಲಿ ತಲುಪಲಿದ್ದಾರೆ. ಅತ್ತ ದೆಹಲಿಯಲ್ಲಿ ರಾಹುಲ್ ಅಧ್ಯಕ್ಷನಾಗಿ ಘೋಷಣೆಯಾಗುತ್ತಿದ್ದರೆ ಇತ್ತ ರಾಹುಲ್ ಗಾಂಧಿ ತನ್ನ ರಾಜಕೀಯ ಶತ್ರುವಾಗಿರುವ ನರೇಂದ್ರ ಮೋದಿ ಅಖಾಡದಲ್ಲಿ ರ‌್ಯಾಲಿಗಳನ್ನು ನಡೆಸುತ್ತಿದ್ದಾರೆ.

 

ಕಳೆದ 19 ವರ್ಷಗಳಿಂದ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಡಿಸೆಂಬರ್ 16 ರಂದು ತನ್ನ ಪುತ್ರ ರಾಹುಲ್ ಗಾಂಧಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

ರಾಹುಲ್ ಗಾಂಧಿ ಅಧ್ಯಕ್ಷೀಯ ಚುನಾವಣೆಯ ನಾಮಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಸೂಚಕರಾಗಿದ್ದರು. ಇದೀಗ ರಾಹುಲ್ ಗೆಲುವಿನ ಹಿನ್ನಲೆಯಲ್ಲಿ ಶುಭ ಕೋರಲು ಸಿಎಂ ಸಿದ್ದರಾಮಯ್ಯ ನಾಳೆ ದೆಹಲಿಗೆ ತೆರಳಲಿದ್ದಾರೆ.