ರಾಜ್ಯದಲ್ಲಿ ವರುಣ ಅಬ್ಬರ- ಜನಜೀವನ ಅಸ್ತವ್ಯಸ್ಥ!

 

ad

ರಾಜ್ಯಕ್ಕೆ ಆಗಮಿಸಿದ ಮುಂಗಾರು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೇ ಕೆಲವೆಡೆಯಲ್ಲಿ ಮುಂಗಾರಿನ ಆರ್ಭಟ ಜೋರಾಗಿದ್ದು, ಮೈಸೂರಿನಲ್ಲಿ ಸುರಿದ ಭಾರಿ ಮಳೆಗೆ ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಕುಸಿದು ಬಿದ್ದ ಮನೆಯಲ್ಲಿ ಮೂರು ಸಂಸಾರಗಳು ವಾಸವಾಗಿದ್ದವು, ಎಲ್ಲರೂ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಮೈಸೂರಿನ ಉದಯಗಿರಿಯ ಗೌಸಿಯಾ ನಗರದ A ಬ್ಲಾಕ್​ನಲ್ಲಿ ಘಟನೆ ನಡೆದಿದ್ದು, ಮನೆಯ ಗೋಡೆ ಬಿರುಕು ಬಿಡುತ್ತಿದ್ದಂತೆ ಮನೆಯಲ್ಲಿದ್ರವರೆಲ್ಲಾ ಹೊರಗೆ ಓಡಿ ಬಂದಿದ್ದು,ಜೀವ ಉಳಿಸಿಕೊಂಡಿದ್ದಾರೆ. ಅವಘಡಕ್ಕಿಡಾದ ಮನೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫೈರೋಜ್​ ಖಾನ್​ಗೆ ಸೇರಿದ್ದು ಎನ್ನಲಾಗಿದೆ.

 

ಇನ್ನು ಗುಲ್ಬರ್ಗಾದಲ್ಲಿ ಹಾಗೂ ಬಳ್ಳಾರಿಯಲ್ಲೂ ಭಾರಿ ಮಳೆ ಸುರಿಯುತ್ತಿದ್ದು, ಜನರು ಕಂಗಾಲಾಗಿದ್ದಾರೆ. ನಗರದಲ್ಲಿ ಹತ್ತಾರು ಮರಗಳು ಧರೆಗುರುಳಿದ್ದು, ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ. ಇದ್ರಿಂದಾಗಿ ರಾತ್ರಿಯೆಲ್ಲಾ ಜನತೆ ಕತ್ತಲಲ್ಲಿ ಕಳೆದಿದ್ದಾರೆ. ಪಾರ್ವತಿ ನಗರ ಹಾಗೂ ಸತ್ಯನಾರಾಯಣ ಪೇಟೆಯಲ್ಲಿ ಮನೆಗಳ ಮೇಲೆ ಮರಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತುಮಕೂರಿನಲ್ಲೂ ವರುಣ ಅಬ್ಬರಿಸಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಕೊರಟಗೆರೆ, ಮಧುಗಿರಿ, ಗುಬ್ಬಿ ಸೇರಿದಂತೆ ಹಲವೆಡೆ ಮಳೆಯಾಗಿದ್ದು ರಸ್ತೆಗಳೆಲ್ಲಾ ನದಿಗಳಂತಾಗಿವೆ. ಇದ್ರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ.