ಮತ್ತೆ ಮರುಕಳಿಸಿದ ಕೊಂಡ ದುರಂತ- ಕೆಂಡಹಾಯುವಾಗ ಕುಸಿದು ಬಿದ್ದು ಗಾಯಗೊಂಡ ಪೂಜಾರಿ!

 

ರಾಜ್ಯದಲ್ಲಿ ಮೌಡ್ಯ ಪ್ರತಿಬಂಧಕ ಕಾಯಿದೆ ಜಾರಿಯಾಗಿದ್ದರೂ ದೇವರ ಹೆಸರಿನಲ್ಲಿ ನಡೆಯುತ್ತಿರುವ ಅನಾಹುತಗಳಿಗೆ ಕಡಿವಾಣ ಬಿದ್ದಿಲ್ಲ. ಹೌದು ಕೊಂಡಹಾಯುವ ಆಚರಣೆ ವೇಳೆ ಪೂಜಾರಿಯೊಬ್ಬ ಕೆಂಡದಲ್ಲಿ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡ ಘಟನೆ ರಾಮನಗರದಲ್ಲಿ ನಡೆದಿದೆ. ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಇಂದು ಬೆಳಗಿನ ಜಾವ ಕೊಂಡಹಾಯುವ ಆಚರಣೆ ನಡೆಯುತ್ತಿತ್ತು. ಈ ವೇಳೆ ಹಲವು ವರ್ಷಗಳಿಂದ ಕೊಂಡ ಹಾಯುತ್ತಿದ್ದ ವಿಜಯಕುಮಾರ್ ಎಂಬ ಪೂಜಾರಿ ಕೊಂಡ ಹಾಯುತ್ತಿದ್ದ ವೇಳೆ ಕೊಂಡದ ಕಟ್ಟಿಗೆ ಕಾಲಿಗೆ ಸಿಲುಕಿ ಬಿದ್ದಿದ್ದಾನೆ. ತೀವ್ರವಾಗಿ ಗಾಯಗೊಂಡ ವಿಜಯಕುಮಾರ್​​​ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಎರಡು-ಮೂರು ವರ್ಷದಿಂದಲೂ ಇಲ್ಲಿ ಕೊಂಡ ಹಾಯುವ ವೇಳೆ ಒಂದಲ್ಲ-ಒಂದು ದುರ್ಘಟನೆ ನಡೆಯುತ್ತಲೇ ಇದೆ ಎನ್ನಲಾಗಿದೆ. ಆದರೂ ದೇವರ ಹೆಸರಿನಲ್ಲಿ ಕೊಂಡ ಸೇವೆಯನ್ನು ಮುಂದುವರಿಸಿಕೊಂಡು ಬರಲಾಗಿದೆ. ಇದೀಗ ವಿಜಯಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ಅವರ ಕುಟುಂಬಸ್ಥರು ಕೊಂಡ ಸೇವೆ ಆಯೋಜಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೇ ಇಲ್ಲಿ ಕೊಂಡ ಸೇವೆ ನಡೆಯುತ್ತಿರೋದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಕ್ರಮಕೈಗೊಂಡಿಲ್ಲ. ಹೀಗಾಗಿ ಇದೀಗ ಮತ್ತೆ ಇದೇ ಘಟನೆ ಮರುಕಳಿಸಿದೆ ಎಂದು ವಿಜಯಕುಮಾರ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.