ಮೈಸೂರಿನಲ್ಲಿ ಹುಲಿ ಹತ್ಯೆ- ಹಂತಕರಿಗಾಗಿ ಶೋಧ!

 

ಜುಲೈ 29ಕ್ಕೆ ವಿಶ್ವ ಹುಲಿದಿನವನ್ನು ಆಚರಿಸಲಾಯ್ತು. ಕರ್ನಾಟಕ ಹುಲಿ ಸಂರಕ್ಷಣೆಯಲ್ಲಿ ನಂಬರ್​​ ಒನ್​​ ಸ್ಥಾನ ಪಡೆದು ಬೀಗಿದ್ದೂ ಆಯ್ತು. ಇಂಥಾ ಹೊತ್ತಲ್ಲೇ ಮೈಸೂರು ಜಿಲ್ಲೆ ಹೆಚ್​ಡಿ ಕೋಟೆ ತಾಲೂಕಿನ ಕಾರಾಪುರ ಕಬಿನಿ ಹಿನ್ನೀರಿನ ಬಳಿ ಹುಲಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದ್ದು, ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹುಲಿಯ ದೇಹದ ಮೇಲೆ ಗುಂಡೇಟಿನ ಗುರುತು ಪತ್ತೆಯಾಗಿದ್ದು, ಉಗುರುಗಳನ್ನು ಕೀಳಲಾಗಿದೆ.

 

ಇನ್ನು ಈ ಹುಲಿ ಕಬಿನಿ ಹಿನ್ನೀರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಅಂತರಸಂತೆ ಅರಣ್ಯದಲ್ಲಿ ಇದ್ದು, ಹಂತಕರು ಇದನ್ನು ಕೊಂದು ಉಗುರುಗಳನ್ನು ಕಿತ್ತ ಬಳಿಕ ಕಾಲಿಗೆ ಪ್ಲಾಸ್ಟಿಕ್ ಕವರ್​ಗಳನ್ನು ಸುತ್ತಿ ದೇಹವನ್ನು ನದಿಗೆ ತೇಲಿಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಅಂತರಸಂತೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು ಹಂತಕರಿಗಾಗಿ ಶೋಧ ನಡೆದಿದೆ.