ಕರ್ನಾಟಕದಲ್ಲಿ ಬಿಜೆಪಿ ಈಗ ರಕ್ತ ರಾಜಕಾರಣ ನಡೆಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಕೇಂದ್ರ ಸಚಿವ ಅನಂತ್ ಕುಮಾರ್ ಮಾತನಾಡುತ್ತಾ, ಜಾತ್ಯಾತೀತರಿಗೆ ಅಪ್ಪ ಅಮ್ಮನ ರಕ್ತದ ಪರಿಚಯ ಇರಲ್ಲ ಎಂದಿದ್ದರು. ಈಗ ರಕ್ತದ ಸರದಿ ಪರಿಷತ್ ಪ್ರತಿಪಕ್ಷದ ನಾಯಕ ಕೆ ಎಸ್ ಈಶ್ವರಪ್ಪನದ್ದು !!
“ನನ್ನ ಮೈಯ್ಯಲ್ಲಿ ಕನಕದಾಸರ ರಕ್ತ ಹರಿಯುತ್ತಿದೆ. ಸಿಎಂ ಸಿದ್ದರಾಮಯ್ಯ ಮೈಯ್ಯಲ್ಲಿ ಬಹುಶಃ ಟಿಪ್ಪು ಸುಲ್ತಾನ್ ರಕ್ತ ಹರಿಯುತ್ತಿರಬೇಕು” ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.ಶಿವಮೊಗ್ಗದ ಹರಮಘಟ್ಟದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ನನಗೆ ನಾಚಿಕೆ ಆಗುತ್ತೆ, ನಾನಂತೂ ಕನಕದಾಸರ ರಕ್ತ ಹಂಚಿಕೊಂಡು ಹುಟ್ಟಿದ್ದೇನೆ. ನೀವು ಯಾವ ರಕ್ತ ಹಂಚಿಕೊಂಡು ಹುಟ್ಟಿದ್ದೀರಾ? ಟಿಪ್ಪು ಸುಲ್ತಾನ್ ರಕ್ತ ಹಂಚಿಕೊಂಡು ಹುಟ್ಟಿರಬೇಕು ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
ರಾಜಕೀಯವಾಗಿ ಆಡಳಿತ, ಪ್ರತಿಪಕ್ಷಗಳು ವಾಗ್ದಾಳಿಯನ್ನು ಮಾಡುವುದು ಮಾಮೂಲಿ. ಆದರೆ ಆ ವಾಗ್ದಾಳಿ ವೈಯುಕ್ತಿಕ ದಾಳಿಯಾಗಿರದೆ ಅಭಿವೃದ್ದಿ ಆಧರಿತ, ಸಿದ್ದಾಂತ ಆಧರಿತವಾಗಿದ್ದರೆ ಅದನ್ನು ಆರೋಗ್ಯಕರ ರಾಜಕಾರಣ ಎನ್ನಬಹುದು. ಈಗಾಗಲೇ ಛೀಮಾರಿಗೊಳಗಾಗಿರೋ ರಕ್ತರಾಜಕಾರಣ ಈಗ ಕೆ ಎಸ್ ಈಶ್ವರಪ್ಪ ಹೇಳಿಕೆಯಿಂದ ಮತ್ತಷ್ಟು ವಿವಾದಕ್ಕೆ ಒಳಗಾಗಬಹುದು.