ಆ ಬಾಲಕಿ ಚರಂಡಿಗಿಳಿದಿದ್ದು ಯಾಕೆ ಗೊತ್ತಾ?- ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾದ ಘಟನೆ

ಆ ಗ್ರಾಮದಲ್ಲಿ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿತ್ತು. ಹೀಗಾಗಿ ಆ ಬಾಲಕಿ ಗ್ರಾಮದ ಆಡಳಿತಕ್ಕೆ ಸ್ವಚ್ಛತೆ ಕಾಪಾಡಿ ಅನ್ನೋ ಮನವಿ ಮಾಡುತ್ತಲೇ ಇದ್ದಳು. ಆದರೇ ದಪ್ಪ ಚರ್ಮದ ಅಧಿಕಾರಿಗಳು ತಲೆಕೆಡಿಸಿಕೊಳ್ಳಲೇ ಇಲ್ಲ.

ಹೀಗಾಗಿ ಗ್ರಾಮದಲ್ಲಿ ಅನಾರೋಗ್ಯ ತಾಂಡವವಾಡುತ್ತಲೇ ಇತ್ತು. ಕೊನೆಗೆ ಬೇಸತ್ತ ಆ ಗ್ರಾಮದ ಬಾಲಕಿಯೇ ಚರಂಡಿಗಿಳಿದು ಸ್ವಚ್ಛತೆಗೆ ಮುಂಧಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮುಖಕ್ಕೆ ಹೊಡೆಯುವಂತೆ ಉತ್ತರಿಸಿದ್ದಾಳೆ. ಚಿಕ್ಕಬಳ್ಳಾಪುರದ ಗೌಡಗೆರೆ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ 14 ವರ್ಷದ ಬಾಲಕಿ ಕವಿತಾ ಬರಿಗಾಲು ಹಾಗೂ ಬರಿಗೈನಲ್ಲಿ ಮನೆಯಲ್ಲಿದ್ದ ಸನಿಕೆ ತೆಗೆದುಕೊಂಡು ಚರಂಡಿ ಸ್ವಚ್ಛಗೊಳಿಸಿದ್ದಾಳೆ. ಬಾಲಕಿಯ ಈ ಪ್ರಯತ್ನವನ್ನು ಗ್ರಾಮಸ್ಥರು ವಿಡಿಯೋ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅಧಿಕಾರಿಗಳ ಅಮಾನವೀಯತೆ ಬಗ್ಗೆಯ ಚರ್ಚೆ ಆರಂಭವಾಗಿದೆ.

ಇನ್ನು ಚರಂಡಿಯ ಗಬ್ಬುವಾಸನೆಯನ್ನು ಲೆಕ್ಕಿಸದೇ ಸ್ವಚ್ಛತೆಗಿಳಿದ ಕವಿತಾಳನ್ನು ಈ ಬಗ್ಗೆ ಪ್ರಶ್ನಿಸಿದಾಗ ಆಕೆ ಅಧಿಕಾರಿಗಳಂತು ನಮ್ಮ ಸಮಸ್ಯೆ ಕೇಳುವುದಿಲ್ಲ. ಸಮಸ್ಯೆ ಬಗೆಹರಿಸುವುದಿಲ್ಲ. ಹೀಗಾಗಿ ನಾನೇ ಸ್ವಚ್ಛತೆಗೆ ಮುಂಧಾಗಿದ್ದೇನೆ ಎಂದಿದ್ದಾಳೆ. ಒಟ್ಟಿನಲ್ಲಿ ಸರ್ಕಾರ ಗ್ರಾಮಗಳ ಸ್ವಚ್ಛತೆ ಕಾಪಾಡಲು ಸಾಕಷ್ಟು ಯೋಜನೆ ರೂಪಿಸುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಸಮಸ್ಯೆಗಿಡಾಗುತ್ತಿರೋದರು ಮಾತ್ರ ದುರಂತವಾಗಿದೆ. ಇದಲ್ಲದೇ ಮೋದಿಯವರ ಸ್ವಚ್ಛಭಾರತದ ಕನಸು ಗ್ರಾಮ ಮಟ್ಟದಲ್ಲೇ ಕಮರುತ್ತಿರುವುದು ಮಾತ್ರ ದುರಂತವೇ ಸರಿ.