ದೇವಿಗೆ ಸೀರೆ ಬದಲು ಚೂಡಿದಾರ್ ತೊಡಿಸಿ ಅಮಾನತ್ತದ ಅರ್ಚಕ!!

ದೇವಾಲಯಗಳಲ್ಲಿ ದೇವತೆಗಳಿಗೆ ಹೂವು,ಹಣ್ಣು,ತರಕಾರಿ,ಸೀರೆಯಿಂದ ಅಲಂಕಾರ ಮಾಡುವುದು ಸಂಪ್ರದಾಯ. ಆದರೇ ಇಲ್ಲೊಬ್ಬರು ಅರ್ಚಕರು ಸಂಪ್ರದಾಯ ಉಲ್ಲಂಘಿಸಿ ದೇವಿಗೆ ಅಲಂಕಾರ ಮಾಡುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದು, ಇದೇ ಕಾರಣಕ್ಕೆ ಅಮಾನತ್ತಾಗಿದ್ದಾರೆ.

ಹೌದು ತಮಿಳುನಾಡಿನ ಮೈಲಾಡುದುರೈ ಜಿಲ್ಲೆಯ ಮಯೂರನಾಥ ದೇವಾಲಯದ ದೇವರ ವಿಗ್ರಹಕ್ಕೆ ಅರ್ಚಕರು ಸೀರೆಯ ಬದಲಿಗೆ ಚೂಡಿದಾರ್‌ ಅಲಂಕಾರ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಯೂರನಾಥ ದೇವಸ್ಥಾನದ ಶಕ್ತಿದೇವತೆಯ ವಿಗ್ರಹಕ್ಕೆ ಅರ್ಚಕರು ಚೂಡಿದಾರ್‌ನ ಅಲಂಕಾರ ಮಾಡಿದ್ದರು. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮಾತ್ರವಲ್ಲ ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾಗಿತ್ತು.

ಶಕ್ತಿದೇವತೆಯ ವಿಗ್ರಹಕ್ಕೆ ಚೂಡಿದಾರ್ ತೊಡಿಸಿದ್ದರಿಂದ ಭಕ್ತರು ಅರ್ಚಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಚಕರನ್ನು ಅಮಾನತ್ತು ಮಾಡಲಾಗಿದೆ. ಶಕ್ತಿ ದೇವತೆಯನ್ನು ಸೀರೆಯ ಹೊರತಾಗಿ ಇತರೆ ಉಡುಪುಗಳಿಂದ ಅಲಂಕರಿಸುವುದು ದೇಗುಲದ ನಿಯಮಗಳಿಗೆ ವಿರುದ್ಧವಾದದ್ದು. ಹೀಗಾಗಿ ಈ ವಿವಾದದ ಬಳಿಕ ತಿರುವಡುತುರೈ ಅಧೀನಂ ಮಠದ ಹಿರಿಯ ಸ್ವಾಮಿಗಳು ಇಬ್ಬರು ಅರ್ಚಕರನ್ನು ಅಮಾನತು ಮಾಡಿದ್ದಾರೆ. ಒಟ್ಟಿನಲ್ಲಿ ದೇವತೆಗೆ ಮಾಡರ್ನ್ ಉಡುಗೆ ತೊಡಿಸಲು ಹೋಗಿ ಅರ್ಚಕರೇ ಸಂಕಷ್ಟಕ್ಕಿಡಾಗಿರೋದು ದುರಂತವೇ ಸರಿ.