ನಗರಸಭೆಗೆ ಬಂದರು ಆ ಭಯಂಕರ ಅತಿಥಿ. ಗಾಬರಿಗೊಳಗಾದ್ರು ಸಿಬ್ಬಂದಿ ವರ್ಗ

ಅತಿ ವಿಷಯುಕ್ತವಾದ ಕೊಳಕಮಂಡಲ ಹಾವೊಂದು ನಗರಸಭೆ ಕಚೇರಿಗೆ ಬಂದು ಅಧಿಕಾರಿಗಳನ್ನ ತಲ್ಲಣಗೊಳಿಸಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಅಧಿಕಾರಿಗಳು ಎಂದಿನಂತೆ ಬೆಳಗ್ಗೆ ಕೆಲಸ ಆರಂಭಿಸಿದ್ರು. ಆದ್ರೆ, ಕಂಪ್ಯೂಟರ್ ಸೆಕ್ಷನ್‍ನಲ್ಲಿ ಮಾನಿಟರ್ ಮೇಲಿಂದ ಕೆಳಗೆ ಇಳಿದ ಹಾವನ್ನ ಕಂಡು ಕಂಪ್ಯೂಟರ್ ಆಪರೇಟರ್‍ಗಳು ಕೂಗಿಕೊಂಡು ಹೊರಗೆ ಓಡಿ ಬಂದಿದ್ರು.

ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಸತತ ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಹಾವನ್ನ ಹಿಡಿದಿದ್ದಾರೆ. ಆದ್ರೆ, ಹಾವು ಅತಿ ಸಣ್ಣದಾಗಿದ್ದ ಪರಿಣಾಮ ಕಚೇರಿಯೊಳಗೆ ಟೇಬಲ್‍ಗಳ ಸಂದಿಯಲ್ಲಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹೋದ ಪರಿಣಾಮ ಕಚೇರಿಯ ಕಡತಗಳು ಹಾಗೂ ಕಂಪ್ಯೂಟರ್‍ಗಳನ್ನ ಒಂದೆಡೆ ತೆಗೆದಿಟ್ಟು, ಅಲ್ಲಿಂದ ಟೇಬಲ್‍ಗಳನ್ನ ಹೊರಗಿಟ್ಟು, ಗೋಡೆಯನ್ನ ಹೊಡೆದು ಹಾಕಿ ಹಾವನ್ನ ಹಿಡಿದಿದ್ದಾರೆ.

 

ನಗರಸಭೆ ಸಿಬ್ಬಂದಿಗಳು ಗೋಡೆಯನ್ನ ಹೊಡೆದು, ಟೇಬಲ್‍ಗಳನ್ನ ಹೊರಗಿಟ್ಟು ಹಾರೆಯಲ್ಲಿ ನೆಲ ಹಾಗೂ ಗೋಡೆಗೆ ಫಿಕ್ಸ್ ಟೇಬಲ್‍ನ ಮೀಟಿ ಸ್ನೇಕ್ ನರೇಶ್‍ಗೆ ಅನುವು ಮಾಡಿಕೊಟ್ಟ ಬಳಿಕ ನರೇಶ್ ಹಾವನ್ನ ಹಿಡಿದಿದ್ದಾರೆ. ಇದ್ರಿಂದ ನಗರಸಭೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.