ಸಾಲು ಮರದ ತಿಮ್ಮಕ್ಕ ನಿಧನ ಸುದ್ದಿ ಹರಡಿದ ಭೂಪನ ಬಂಧನ !! ಮನಸ್ಸುಗಳನ್ನು ಕದಡಿದ ಮನಸ್ಸುಗಳ ಮಾತು ಮಧುರ !!

 

ad

ಸಾವಿರಾರು ಸಸಿಗಳ, ಮರಗಿಡಗಳ ತಾಯಿ, ತನಗರಿವಿಲ್ಲದೆ ಅಸಂಖ್ಯ ಜನರಿಗೆ ಉಸಿರುಣಿಸುತ್ತಿದ್ದ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಸುದ್ದಿ ಹರಡಿದ ದಿನವದು. ಕೋಟ್ಯಾಂತರ ಜನರಿಗೆ ಉಸಿರುಗಟ್ಟಿಸುವ ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಆದರೆ ಕೆಲ ಸಮಯದ ಬಳಿಕ ಅದೊಂದು ಫೇಕ್ ನ್ಯೂಸ್ ಎಂದು ಖಾತರಿಯಾಗಿತ್ತು.ಸಾಲು ಮರದ ತಿಮ್ಮಕ್ಕನಂತಹ ಮಹಾತಾಯಿಯ ಬದುಕಿನ ವಿಚಾರದಲ್ಲೂ ಫೇಕ್ ಸುದ್ದಿ ಹರಡುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಒತ್ತಾಯಗಳು ಕೇಳಿ ಬಂದಿದ್ದವು. ತಿಮ್ಮಕ್ಕರ ಪುತ್ರ ವನಸಿರಿ ಈ ಬಗ್ಗೆ ಪೊಲೀಸರಿಗೆ ದೂರು ಕೂಡಾ ನೀಡಿದ್ದರು.ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾಗಡಿ ರಸ್ತೆಯಲ್ಲಿ ಓಲಾ ಮತ್ತು ಉಬರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಪ್ರದೀಪ್ ಗೌಡ ಬಂಧಿತ ಆರೋಪಿ.

 

ಪ್ರದೀಪ್ ಗೌಡನು ಪ್ರದೀಪ್ ಗೌಡ ರನ್ನ ಎಂಬ ಇಂಗ್ಲೀಷ್ ಹೆಸರಿನ ಫೇಸ್ ಬುಕ್ ಖಾತೆ ಹೊಂದಿದ್ದಾನೆ. ಜೊತೆಗೆ ಮನಸ್ಸುಗಳ ಮಾತು ಮಧುರ ಮತ್ತು ಸ್ನೇಹ ಲೋಕ ಎಂಬ ಫೇಸ್ ಬುಕ್ ಪೇಜ್ ನಲ್ಲೂ ಸದಸ್ಯನಾಗಿದ್ದಾನೆ.ಮೂಲತಹ ಮೈಸೂರಿನವನಾಗಿರುವ ಪ್ರದೀಪ್ ಗೌಡ ಮಾಗಡಿ ರಸ್ತೆಯ ಪೈಪ್ ಲೈನ್ ಬಳಿ ವಾಸವಿದ್ದು, ಫೇಸ್ ಬುಕ್ ಖಾತೆಯೊಂದರಲ್ಲಿ ಲಭ್ಯವಾದ ವೃದ್ದೆ ನಿಧನದ ಫೋಟೋವನ್ನು ಅಪ್ಲೋಡ್ ಮಾಡಿ ಸಾಲು ಮರದ ತಿಮ್ಮಕ್ಕ ನಿಧನರಾಗಿದ್ದಾರೆ ಎಂದು ಸುದ್ದಿ ಹಬ್ಬಿಸಿದ. ಇದನ್ನು ಮನಸ್ಸುಗಳ ಮಾತು ಮಧುರ ಮತ್ತು ಸ್ನೇಹ ಲೋಕ ಪೇಜ್ ನಲ್ಲೂ ಹಾಕಲಾಗಿತ್ತು. ಇದು ವೈರಲ್ ಆಗಿ ಕೋಟ್ಯಾಂತರ ಜನ ನೊಂದುಕೊಳ್ಳುವಂತಾಗಿತ್ತು. ಇದೀಗ ಫೇಕ್ ನ್ಯೂಸ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಎರಡು ಪೇಜ್ ಗಳ ಸದಸ್ಯರ ಮೇಲೆ ಕಾನೂನು ಕ್ರಮಕ್ಕಾಗಿ ತನಿಖೆ ನಡೆಸಲಾಗುತ್ತಿದೆ.