ಎಚ್ ಡಿ ದೇವೇಗೌಡರನ್ನೂ ಮೀರಿಸೋ ಪಕ್ಷ ನಿಷ್ಠರಿದ್ದಾರೆ ! ಜೆಡಿಎಸ್ ಗೆ ಮತ ಹಾಕಬೇಡಿ ಎಂದರೂ ಹಾಕುತ್ತಾರೆ !!

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನೂ ಮೀರಿಸೋ ಪಕ್ಷ ನಿಷ್ಟರು ಜೆಡಿಎಸ್ ನಲ್ಲಿ ಇದ್ದಾರೆ. ತನ್ನ ಜೆಡಿಎಸ್ ಪಕ್ಷಕ್ಕೆ ಈ ಬಾರಿಯ ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕಬೇಡಿ ಎಂದು ಕಾರ್ಯಕರ್ತರಿಗೆ ಖುದ್ದು ಎಚ್ ಡಿ ದೇವೇಗೌಡರೇ ಹೇಳಿದರೂ ಸಾವಿರ ಸನಿಹದ ಕಾರ್ಯಕರ್ತರು ಕಿವಿಗೇ ಹಾಕಿಲ್ಲ.ಹೌದು. ಈ ಬಾರಿಯ ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಅಂತಿಮ ಕ್ಷಣದಲ್ಲಿ ಜೆಡಿಎಸ್ ಕಣದಿಂದ ಹಿಂದೆ ಸರಿದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಅನ್ನು ಬೆಂಬಲಿಸೋ ನಿರ್ಧಾರ ಕೈಗೊಂಡಿತ್ತು. ಕಣದಿಂದ ಹಿಂದೆ ಸರಿಯುವ ಬಗ್ಗೆ ಎಚ್ ಡಿ ದೇವೇಗೌಡರು ಅಧಿಕೃತ ಪ್ರಕಟಣೆ ಹೊರಡಿಸಿದ್ದರು.

ಬಿಜೆಪಿಯ ವಿಜಯಕುಮಾರ್ ನಿಧನದ ಹಿನ್ನಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು. ಮುಂದೂಡಿದ ಚುನಾವಣೆಯಲ್ಲಿ ಬಿಜೆಪಿಗೆ ಮಾತ್ರ ಹೊಸದಾಗಿ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ಉಳಿದ ಪಕ್ಷಗಳ ಈ ಹಿಂದಿನ ನಾಮಪತ್ರವನ್ನೇ ಮುಂದುವರೆಸಲಾಗಿತ್ತು. ನಾಮ ಪತ್ರವನ್ನು ಹಿಂಪಡೆಯುವಂತೆಯೂ ಅವಕಾಶ ಇರಲಿಲ್ಲ. ಆದ್ದರಿಂದ ಜೆಡಿಎಸ್ ಅಭ್ಯರ್ಥಿ ಕಾಳೇಗೌಡರು ನಾಮಪತ್ರ ಹಿಂಪಡೆಯುವಂತಿಲ್ಲ.ಕಾಂಗ್ರೆಸ್ ಜೊತೆಗೆ ಜೆಡಿಎಸ್ ಮೈತ್ರಿ ಬಳಿಕ ಜೆಡಿಎಸ್ ಜಯನಗರದಿಂದ ಹಿಂದೆ ಸರಿದಿದ್ದರೂ ಮತಯಂತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಸರಿತ್ತು. ಜೆಡಿಎಸ್ ಗೆ ಹಾಕೋ‌ ಮತವನ್ನು ಕಾಂಗ್ರೆಸ್ ಗೆ ಹಾಕಿ ಎಂದು ಖುದ್ದು ಎಚ್ ಡಿ ದೇವೇಗೌಡರು ಹೇಳಿದರೂ, ಜೆಡಿಎಸ್ ಗೆ 871 ಮತಗಳು ಬಿದ್ದಿವೆ.