ರೋಗಿಗಳಿಗೆ ಎರಡು ಹೊತ್ತು ಊಟ ಹಾಕೋಕು ಪರದಾಡೋ ಸರ್ಕಾರಿ ಆಸ್ಪತ್ರೆ ಯಾವುದು ಗೊತ್ತಾ?!

ಗದಗನ ಜಿಲ್ಲಾಸ್ಪತ್ರೆ ಜಿಮ್ಸ್ ಆಡಳಿತಕ್ಕೆ ಹೇಳೋರೋ ಕೇಳೋರು ಯಾರೂ ಇಲ್ಲದಂತಾಗಿದೆ. ತಾವು ಆಡಿದ್ದೇ ಆಟ ಎಂಬಂತೆ ಜಿಮ್ಸ್ ಆಡಳಿತ ಮಂಡಳಿ ವರ್ತಿಸುತ್ತಿದ್ದು, ಇದರಿಂದ ಹೌದು ಬಡ ರೋಗಿಗಳ ಸ್ಥಿತಿ ಕೇಳುವವರಿಲ್ಲದಂತಾಗಿದೆ.
ಹೌದು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವ ರೋಗಿಗಳಿಗೆ ಊಟ ಕೊಡುವ ನಿಯಮವಿದೆ. ಆದರೇ ಜಿಮ್ಸ್​​ನಲ್ಲಿ ಅದಕ್ಕೂ ಅಧಿಕಾರಿಗಳು ಬ್ರೇಕ್​ ಹಾಕಿದ್ದು, ಅಡ್ಮಿಟ್​ ಆಗಿ ಮೂರು ದಿನಗಳಷ್ಟೇ ಊಟು-ತಿಂಡಿ ಕೊಡಲು ಜಿಮ್ಸ್​ ನಿರ್ಧರಿಸಿದೆ. ಇದರಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಬಡ ರೋಗಿಗಳು ಕಂಗಾಲಾಗಿದ್ದಾರೆ.

ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ, ಆಹಾರ ನೀಡೋಕೆ ಸರ್ಕಾರ ಕೋಟಿ ಕೋಟಿ ಹಣ ನೀಡ್ತಾಯಿದೆ. ಆದರೀಗ ರೋಗಿಗಳ ಊಟಕ್ಕೂ ಜಿಮ್ಸ್ ಆಡಳಿತ ಕನ್ನ ಹಾಕಿದೆ. ಇನ್ನು ಇದರಿಂದ ನೊಂದಿರುವ ರೋಗಿಗಳು, ಊಟದ ಬಗ್ಗೆ ಬಾಯಿ ಬಿಟ್ಟರೇ ಎಲ್ಲಿ ತಮಗೆ ಚಿಕಿತ್ಸೆ ಸಿಗುತ್ತೋ ಇಲ್ವೋ ಎಂದು ಕಂಗಾಲಾಗಿ ಬಾಯಿ ಬಿಡಲೇ ಒಪ್ಪುತ್ತಿಲ್ಲ.

ಇನ್ನು ಜಿಮ್ಸ್ ಆಸ್ಪತ್ರೆ ಗದಗ ನಗರದಿಂದ ೫ ಕಿಲೋಮೀಟರ್ ದೂರವಿದೆ. ರಾತ್ರಿ ಆಸ್ಪತ್ರೆಯಲ್ಲಿ ‌ಊಟ ನೀಡದಿದ್ರೆ ರೋಗಿಗಳು ಊಟವಿಲ್ಲದೇ ಉಪವಾಸ ಮಲಗುವ ದುಸ್ಥಿತಿ ಇದೆ. ಜಿಮ್ಸ್ ಆಡಳಿತದ ಹಣದ ದಾಹಕ್ಕೆ ರೋಗಿಗಳ ಅನ್ನವೂ ಸಾಲುತ್ತಿಲ್ಲ. ಈ ಬಗ್ಗೆ ಜಿಮ್ಸ್ ನಿರ್ದೇಶಕ ಪಿ ಎಸ್ ಭೂಸರೆಡ್ಡಿ ಅವ್ರನ್ನು‌ ಕೇಳಿದ್ರೆ, ಇಲ್ಲ ಊಟದ ವ್ಯವಸ್ಥೆ ಇನ್ನು ಆರೋಗ್ಯ ಇಲಾಖೆ ಅಡಿಯಲ್ಲಿದೆ. ಈಗ ನನ್ನ ಗಮನಕ್ಕೆ ತಂದಿದ್ದೀರಿ ಪರಿಶೀಲನೆ ಮಾಡಿ ಕ್ರಮ ಕೈಗೋಳ್ತೀನಿ ಅಂತಾರೆ.