ಈ ಮನೆ ನೋಡಿದ್ರೆ ನೀವು ಒಮ್ಮೆ ಬೆಚ್ಚಿ ಬೀಳುವುದು ಖಂಡಿತ.. ನೋಡಿ ಒಮ್ಮೆ.

ಹಾವಿನ ಹುತ್ತಗಳು ನಿರ್ಜನ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಇರೋದು ಸಾಮಾನ್ಯ. ಆದ್ರೆ ಇಲ್ಲೊಂದು ಹಾವು ನಡುಮನೆಯಲ್ಲೇ ಹುತ್ತದಲ್ಲಿ ವಾಸ ಮಾಡುವ ಮೂಲಕ ಅಚ್ಚರಿ ಮೂಡಿಸುವದರೊಂದಿಗೆ ಮನೆಯಲ್ಲಿ ವಾಸಗಿರುವ ಕುಟುಂಬವನ್ನ ಮನೆಯಿಂದಲೇ ಹೊರ ಹಾಕಿದೆ.

ಹೌದು ನಂಬಲು ಸ್ವಲ್ಪ ಕಷ್ಟ ಅನಿಸಿದ್ರು ನಂಬಲೇಬೇಕಾದ ಸ್ಟೋರಿ ಇದು. ಇಂತಹದೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿರೋದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹಲಕಿ ಗ್ರಾಮ. ಹಲಕಿ ಗ್ರಾಮದ ಭೀಮಪ್ಪ ಮತ್ತು ಯಲ್ಲವ್ವ ತಳವಾರ ದಂಪತಿ ತಮ್ಮ ಮಾತು ಬಾರದ ಮಗ ಪುಂಡಲೀಕ ನೊಂದಿಗೆ ಸರಕಾರದ ಆಶ್ರಯ ಮನೆಯಲ್ಲಿ ವಾಸವಾಗಿದ್ದಾರೆ.

ಸುಮಾರು ಐದಾರು ವರ್ಷ ಕಳೆದ ನಂತರ ಮನೆಯಲ್ಲಿ ಹುತ್ತ ಬೆಳೆಯಲಾರಂಭಿಸಿದೆ.  ಎರಡು ಕೊಣೆಗಳಿರುವ ಚಿಕ್ಕ ಮನೆಯಲ್ಲಿ ಮಧ್ಯದ ಗೋಡೆಯ ಮೇಲೆ ಹುತ್ತದ ಕುರುಹು ಕಂಡ ಮನೆಯವರು ಹುತ್ತವನ್ನ ಸ್ವಚ್ಚಗೊಳಿಸಿದ್ದಾರೆ. ಆದ್ರೆ ಹುತ್ತ ಮತ್ತೆ ಮತ್ತೆ ಬೆಳೆಯಲಾರಂಭಿಸಿದೆ. ಅಷ್ಟೇ ಅಲ್ಲದೇ ಮನೆಯ ಹೆಂಚುಗಳ ಮಧ್ಯೆ ನಾಗರ ಹಾವೊಂದು ಓಡಾಡುತ್ತಿರುವುದು ಹಾಗೂ ಕ್ಷಣಾರ್ಧದಲ್ಲಿ ಮಾಯವಾಗುತ್ತಿರುವುದು ಮನೆಯವರಿಗೆ ಕಂಡಿದೆ.

ಇದರಿಂದ ಗಾಬರಿಯಾದ ತಳವಾರ ಕುಟುಂಬದವರು ಗ್ರಾಮಸ್ಥರ ಸಲಹೆಯಂತೆ ಕೆಲ ದಿನಗಳ ಕಾಲ ಮನೆ ಬಿಟ್ಟಿದ್ದಾರೆ. ಆದ್ರೆ ಅಷ್ಟರಲ್ಲೇ ಹುತ್ತ ಸುಮಾರು ನಾಲ್ಕು ಅಡಿಗಳಷ್ಟು ಬೆಳೆದು ನಿಂತಿದ್ದಲ್ಲದೇ ನಾಗರ ಹಾವೊಂದು ಹುತ್ತದಿಂದ ಹೊರಬಂದ ದೃಶ್ಯ ಅವರ ಮೂಗ ಮಗ ಪುಂಡಲೀಕನ ಕಣ್ಣಿಗೆ ಬಿದ್ದಿದೆ. ಹೀಗಾಗಿ ಈ ಮನೆಯಲ್ಲಿ ವಾಸವಾಗಿರಲು ಅಸಾಧ್ಯವೆಂದು ಅರಿತ ತಳವಾರ ಕುಟುಂಬದವರು ಅದೇ ಬೀದಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಈ ಘಟನೆ ಇಡೀ ಹಲಕಿ ಗ್ರಾಮದ ಜನರನ್ನ ಅಚ್ಚರಿಗೆ ದೂಡಿದ್ದು ಇದು ದೇವರ ಲೀಲೆಯೆ ಇರಬಹುದೆಂದು ಭಾವಿಸಿದ್ದಾರೆ. ಪ್ರತಿನಿತ್ಯವು ತಳವಾರ ಮನೆಯವರು ಹಾಗೂ ಗ್ರಾಮಸ್ಥರು ಹಾವಿನಹುತ್ತಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.