ನೀವು ಸಿಎಂ ಆಗಿದ್ದು ಇದೇ ಇವಿಎಂ ನಿಂದಲ್ವಾ? – ಬಿಎಸ್​ವೈ ಪ್ರಶ್ನೆ..

ಕುಣಿಯಲು ಬಾರದವರು ನೆಲ ಡೊಂಕು ಎಂದಂತೆ ಕಾಂಗ್ರೆಸ್​ನವರು ಗೆಲ್ಲಲಾಗದೇ ಇವಿಎಂ ಮೆಶಿನ್​​ಗಳನ್ನು ದೂರುತ್ತಿದ್ದಾರೆ. ಇದೇ ಇವಿಎಂ ಮೆಶಿನ್​ನಿಂದಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದನ್ನು ಅವರು ಮರೆತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ. ಗುಜರಾತಿನಲ್ಲಿ ಬಿಜೆಪಿ ಗೆಲುವಿನ ಬಳಿಕ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿದ ಬಳಿಕ ಮಾತನಾಡಿದ ಬಿಎಸ್​ವೈ ಜಾತಿ ರಾಜಕಾರಣದ ಮೂಲಕ ಅಧಿಕಾರ ಪಡೆಯುವ ಕಾಂಗ್ರೆಸ್ ಪಕ್ಷದ ಕನಸಿಗೆ ಜನರು ಸರಿಯಾದ ಪಾಠ ಕಲಿಸಿದ್ದಾರೆ ಎಂದರು.

ad


ಸುದ್ದಿಗೋಷ್ಠಿಗೂ ಮೊದಲು ಮಲ್ಲೇಶ್ವರಂ ಕಚೇರಿಯಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪರಸ್ಪರ ಸಿಹಿ ತಿನ್ನಿಸಿ ವಿಜಯೋತ್ಸವ ಆಚರಿಸಿದರು. ಬಳಿಕ ಮಾತನಾಡಿದ ಯಡಿಯೂರಪ್ಪ, ಸತತ ಆರನೇ ಬಾರಿಗೆ ಗುಜರಾತಿನ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ. ಇದೀಗ ಎಲ್ಲರ ಚಿತ್ತ ಕರ್ನಾಟಕದ ಮೇಲಿದೆ. ರಾಜ್ಯದಲ್ಲಿ ನೂರೈವ್ವತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಪರಿವರ್ತನಾ ರ್ಯಾಲಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ, ನಾಳೆಯಿಂದ ಮತ್ತಷ್ಟು ಹೆಚ್ಚಿನ ಬೆಂಬಲ ಪರಿವರ್ತನಾ ರ್ಯಾಲಿಗೆ ಸಿಗಲಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಪ್ರವಾಸದಿಂದ ಗೆಲುವು ಸಾಧ್ಯವಾಗಿದೆ ಎಂದರು.

ಗುಜರಾತ ಗೆಲುವು ನಮಗೆ ಇನ್ನಷ್ಟು ಶಕ್ತಿ ತುಂಬಿದ್ದು, ನಾಳೆಯಿಂದ ನವಕರ್ನಾಟಕ ಪರಿವರ್ತನಾ ರ್ಯಾಲಿ ಅದ್ದೂರಿಯಾಗುತ್ತದೆ. ಇನ್ನೂ ಹಲವಾರು ಜನ ನಮ್ಮ ಪಕ್ಷಕ್ಕೆ ಸೇರುತ್ತಾರೆ. ಸಿದ್ದರಾಮಯ್ಯ ಹೇಳಿದಂತೆ ಕರ್ನಾಟಕ ಖಂಡಿತ ಗುಜರಾತ್ ಅಲ್ಲ. ಆದರೆ ನಾವು ಕರ್ನಾಟಕವನ್ನು ಗುಜರಾತ್ ನಂತೆ ಮಾಡುತ್ತೇವೆ ಎಂದು ಯಡಿಯೂರಪ್ಪ ಚಾಲೆಂಜ್ ಹಾಕಿದ್ದಾರೆ. ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಗುಜರಾತ ಎಲೆಕ್ಷನ್​ ರಿಸಲ್ಟ್​​ ಹೊಸ ಸಂಚಲನ ಮೂಡಿಸಿರುವುದು ಸುಳ್ಳಲ್ಲ.