ಜುಲೈ 13 ರಂದು ಕರ್ನಾಟಕ ಬಂದ್​​! ಸರ್ಕಾರಕ್ಕೆ ವಾಟಾಳ ನಾಗರಾಜ್ ಎಚ್ಚರಿಕೆ ನೀಡಿದ್ದ್ಯಾಕೆ ಗೊತ್ತಾ?!

ರಾಘವೇಂದ್ರ ಔರಾದ್ಕರ್ ವರದಿಯನ್ನು ಒಂದು ತಿಂಗಳೊಳಗೆ ಅನುಷ್ಠಾನಗೊಳಿಸದಿದ್ದರೆ ಜುಲೈ 13 ರಂದು ‘ಕರ್ನಾಟಕ ಬಂದ್’ ನಡೆಸುವುದಾಗಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಕರೆಯನ್ನು ನೀಡಿದ್ದಾರೆ.

“ರಾಜ್ಯದಲ್ಲಿ ಪೊಲೀಸರಿಗೆ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿಲ್ಲ, ರಜೆ ಸಿಗುವುದು ಕನಸಿನ ಮಾತಾಗಿದ್ದು, ನರಕ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೂಡಲೇ ಔರಾದ್ಕರ್ ವರದಿ ಜಾರಿಗೊಳಿಸಬೇಕು” ಎಂದು ನಿನ್ನೆ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿರುವ ದೇವರಾಜ್ ಅರಸು ಪ್ರತಿಮೆ ಮುಂಭಾಗದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ವಿನೂತನವಾಗಿ ಪ್ರತಿಭಟಿಸಿದರು.

ಆದರೆ ವಿಧಾನಸೌಧದ ಸುತ್ತಮುತ್ತ ಪ್ರತಿಭಟನೆ ನಿಷೇಧಿಸಿರುವುದರಿಂದ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.

ಪ್ರತಿಭಟನೆ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ಪೊಲೀಸ್ ಸಿಬ್ಬಂದಿಗೆ ಶೇಕಡಾ 30 ರಿಂದ 35 ರಷ್ಟು ವೇತನ ಪರಿಷ್ಕರಣೆ ಮಾಡಬೇಕೆಂದು ಔರಾದ್ಕರ್ ನೇತೃತ್ವದ ಸಮಿತಿ 2016ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ವರದಿ ಅನುಷ್ಠಾನ ಮಾಡುವಲ್ಲಿ ಸರ್ಕಾರ ಮೀನಾ ಮೇಷ ಎಣಿಸುತ್ತಿದ್ದು ಪೊಲೀಸ್ ಇಲಾಖೆಯ ‘ಡಿ ಗ್ರೂಪ್’ ನೌಕರರು ಬಡ್ತಿ ಸಿಗದೆ ವಂಚಿತರಾಗುತ್ತಿದ್ದಾರೆ ಎಂದರು.