ಕೆಎಸ್ಆರ್ಟಿಸಿ ಬಸ್ ಅಪಘಾತದ ರಹಸ್ಯ ಬಿಚ್ಚಿಟ್ಟ ಡ್ರೈವರ್ ಗೆ ಸಿಕ್ಕ ಉಡುಗೊರೆ ಏನು ಗೊತ್ತಾ?!

ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತಗಳ ಬಗ್ಗೆ ನೀವು ನೋಡಿರ್ತೀರಾ ಕೇಳಿರ್ತೀರಾ. ಸರ್ಕಾರಿ ಬಸ್ ಗಳ ಅಪಘಾತಕ್ಕೆ ಯಾರು ಹೊಣೆ ಗೊತ್ತಾ. ಅಪಘಾತವನ್ನು ಡ್ರೈವರ್ ಗಳ ತಲೆಗೆ ಕಟ್ಟುವ ವ್ಯವಸ್ಥೆ ವಿರುದ್ಧ ಇಲ್ಲೊಬ್ಬ ಡ್ರೈವರ್ ಸಿಡಿದೆದ್ದಿದ್ದಾನೆ. ಕೆ.ಎಸ್.ಆರ್.ಟಿ.ಸಿ ಕರ್ಮಕಾಂಡವನ್ನು ಬಯಲು ಮಾಡಿದ ಆ ಡ್ರೈವರ್ ಗೆ ಈಗ ಇಲಾಖೆ ನೋಟೀಸ್ ಜಾರಿ ಮಾಡಿದೆ. ಮಂಗಳೂರು ಡಿಪೊದಿಂದ ಹೊರಟ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಮೈಸೂರಿನಿಂದ ವಾಪಾಸ್ ಆಗುವಾಗ ಮಡಿಕೇರಿಯಲ್ಲಿ ನಾಲ್ಕು ಟೈರ್ ಗಳ ಅಸೆಂಬ್ಲಿ ಕಳಚಿಕೊಂಡ ಘಟನೆ ಬಗ್ಗೆ ನಾವು ಕೇಳಿದ್ದೇವೆ ನೋಡಿದ್ದೇವೆ. ಈ ಅಪಘಾತದದ ಹೊಣೆಯನ್ನು ಬಸ್ ಚಾಲಕನ ಮೇಲೆ ಹಾಕಲಾಯ್ತು. ಅಷ್ಟಕ್ಕೂ ಕೆಟ್ಟು ಕೊಳಕಾದ ಬಸ್ ಗಳನ್ನು ರೂಟ್ ಗೆ ಕಳಿಸುವ ಅಧಿಕಾರಿಗಳ ಮೇಲೆ ಕ್ರಮ ಆಗಲಿಲ್ಲ. ಇದು ಒಂದು ಉದಾಹರಣೆ ಅಷ್ಟೆ. ಹೆಚ್ಚಿನ ಅಪಘಾತದಲ್ಲಿ ಡ್ರೈವರ್ ಗಿಂದ ಬಸ್ ನ ಸಮಸ್ಯೆಯೆ ಹೆಚ್ಚಾಗಿರುತ್ತೆ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಡಿಪೊದ ಚಾಲಕನೊಬ್ಬ ಬಸ್ಸಿನ ಲೋಪವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು…

ಮೊಬೈಲ್ ಮೂಲಕ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡೀಯೋ ಹರಿಬಿಟ್ಟ ಚಾಲಕನ ಹೆಸರು ರಮೇಶ್. ಧರ್ಮಸ್ಥಳ ಡಿಪೋದ ಕೆ.ಎ. 19 ಎಫ್ 3262 ಸಂಖ್ಯೆ ಬಸ್ ನ ಡ್ರೈವರು. ಟೈರ್ ನಲ್ಲಿ ಬೋಲ್ಟ್ ಇಲ್ಲದ, ಸ್ಟೈರಿಂಗ್ ಸರಿಯಿಲ್ಲದ ಹಾಳಾದ ಬಸ್ ನ್ನು ಇವರಿಗೆ ಓಡಿಸಲು ಕೊಡಲಾಗಿತ್ತು. ಚಾರ್ಮಾಡಿ ಘಾಟ್ ಸೆಕ್ಷನ್ ನಂತಹ ತಿರುವುಗಳಲ್ಲಿ ಇಂತಹ ಬಸ್ ಗಳನ್ನು ಓಡಿಸಲು ಹೇಗೆ ತಾನೆ ಸಾದ್ಯ. ಇನ್ನು ಬಸ್ ಗಳು ಅಪಘಾತವಾದ್ರೆ ಅದರ ಹೊಣೆ ಡ್ರೈವರ್ ನದ್ದು. ಬಸ್ ಗೆ ಏನೇ ಡ್ಯಾಮೇಜ್ ಆದ್ರು ಅದು ಡ್ರೈವರ್ ನ ಸಂಬಳಕ್ಕೆ ಕುತ್ತು ಬರುತ್ತೆ. ಆದ್ರೆ ಈ ಹೊಣೆಯಿಂದ ಮ್ಯಾಕಾನಿಕ್, ವಿಭಾಗೀಯ ನಿಯಂತ್ರಣಾಧಿಕಾರಿಗಳು ಹೊರುವುದಿಲ್ಲ. ಪ್ರಶ್ನಿಸಿದ್ರೆ ಶಿಸ್ತು ಕ್ರಮ ಅಂತಾ ಬೆದರಿಸುತ್ತಾರೆ. ಅದಕ್ಕಾಗಿ ಕಳೆದ ವಾರ ಚಾಲಕ ರಮೇಶ್ ಬಸ್, ಡಿಪೋ ಹಾಗೂ ಕೆ.ಎಸ್.ಆರ್.ಟಿ.ಸಿ ವ್ಯವಸ್ಥೆಯ ಬಗ್ಗೆ ವಿಡೀಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇದು ಗೊತ್ತಾಗಿ ಈಗ ಇಲಾಖೆ ರಮೇಶ್ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಅನ್ಯಾಯ ಹಾಗೂ ವ್ಯವಸ್ಥೆಯ ಲೋಪವನ್ನು ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ, ಇಲಾಖೆಗೆ ಮುಂದಿನ ದಿನಗಳಲ್ಲಿ ಕೆಟ್ಟ ಹೆಸರು ಬರಬಾರದು ಅನ್ನೊ ದೃಷ್ಟಿಯಿಂದ ಬಯಲು ಮಾಡಿದೆ. ಆದ್ರೆ ಇದನ್ನು ಬಯಲು ಮಾಡಿದ್ದೆ ತಪ್ಪಾ ಅನ್ನೊದು ರಮೇಶ್ ಪ್ರಶ್ನೆ.

 ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಅವರು ಹೇಳೊದೆ ಬೇರೆ. ಇದು ಇಲಾಖೆಯ ಒಳಗಡೆಯ ವಿಚಾರ. ಇದನ್ನು ಬಯಲು ಮಾಡಿದ್ದು ತಪ್ಪು. ಆದ ಕಾರಣ ಕೇಳಿ ಶೋಕಾಸ್ ನೋಟೀಸ್ ಜಾರಿ ಮಾಡಿದ್ದೇವೆ. ಇನ್ನು ಬಸ್ ಗಳ ವ್ಯವಸ್ಥೆಯ ಬಗ್ಗೆ ಯಾವ ಸಮಸ್ಯೆಯಿಲ್ಲ ಅಂತಾ ಹೇಳಿ ನುಣುಚಿಕೊಳ್ಳುತ್ತಾರೆ. ಆದ್ರೆ ಈ ಅವ್ಯವಸ್ಥೆ ಬಿಚ್ಚಿಟ್ಟ ಸತ್ಯ ಅನ್ನೊದು ಅವರಿಗೂ ಗೊತ್ತಿದೆ. ಎಲ್ಲಾ ಚಾಲಕರು ಮತ್ತು ನಿರ್ವಾಹಕರು ತಮ್ಮ ತಮ್ಮ ಡಿಪೋ ಮತ್ತು ವ್ಯವಸ್ಥೆ ಬಗ್ಗೆ ಇದೇ ದೂರುನ್ನು ನೀಡುತ್ತಾರೆ. ಆದ್ರೆ ಹೀಗೆ ಓಪನ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿರಲಿಲ್ಲ. ಇನ್ನು ರಮೇಶ್ ತನಗೆ ಈ ಡಿಪೊದಲ್ಲಿ ಅಪಾಯವಿದೆ ಅಂತಾ ಕೂಡ ಹೇಳಿದ್ದಾರೆ. ಅದೇನೆ ಇದ್ರು ರಮೇಶ್ ಅವರ ದೈರ್ಯ ಮತ್ತು ಸಾಮಾಜಿಕ ಕಳಕಳಿ ಮೆಚ್ಚುವಂತದ್ದೆ ಅಲ್ವಾ.