ಸರಕಾರ ನಾಳೆನೇ ಬೀಳುತ್ತಾ ಎಂಬ ಪ್ರಶ್ನೆ ಎದ್ದಿದ್ದೇಕೆ ಗೊತ್ತಾ ? ಕಾಂಗ್ರೆಸ್ ಶಾಸಕರ ಸಭೆಯಲ್ಲಿ ನಡೆದಿದ್ದೇನು ?

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಂಡಿಸಿರೊ ಬಜೆಟ್ ಗೆ ನಾಳೆ ಉಭಯ ಸದನದಲ್ಲಿ ಅನುಮೋದನೆ ದೊರಕಬೇಕಿದೆ. ಒಂದು ವೇಳೆ ಈ ಫೈನಾನ್ಸ್ ಬಿಲ್ ಗೆ ಅನುಮೋದನೆ ಸಿಗದೇ ಇದ್ದರೆ ಸರಕಾರ ಉರಳಲಿದೆ. ಈ ಅನುಮಾನ ಬರಲು ಕಾರಣವಾಗಿದ್ದು ಇಂದು ಕರೆಯಲಾಗಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಅರ್ಧದಷ್ಟು ಹಿರಿಯ ಶಾಸಕರ ಗೈರು ! ಇವತ್ತು ಗೈರಾದ ಕೈ ಶಾಸಕರೂ ನಾಳೆಯೂ ಗೈರಾದರೆ ಫೈನಾನ್ಸ್ ಬಿಲ್ ಬಿದ್ದುಹೋಗಲಿದೆ. ಬಜೆಟ್ ನಲ್ಲಾದ ಪ್ರಾದೇಶಿಕ ತಾರತಮ್ಯ, ಸಚಿವ ಸಂಪುಟದಲ್ಲಿ ಅವಕಾಶ ಇಲ್ಲದಿರುವಿಕೆ, ಕೆಲವರಷ್ಟೇ ಅಧಿಕಾರ ಅನುಭವಿಸುವುದರ ವಿರುದ್ದ ಹಲವು ಕೈ ಶಾಸಕರು ಹರಿಹಾಯ್ದಿದ್ದಾರೆ.ಅಲ್ಲದೆ ಶೀಘ್ರ ಸಚಿವ ಸಂಪುಟ ವಿಸ್ತರಣೆಗೆ ಅತೃಪ್ತ ಶಾಸಕರು ಒತ್ತಾಯಿಸಿದ್ದಾರೆ.

ಮೈತ್ರಿ ಸರ್ಕಾರದ ಬಜೆಟ್ ಮಂಡನೆಯಿಂದಾಗಿರುವ ಸಮಸ್ಯೆಗಳು, ಪಕ್ಷದಲ್ಲಾಗಿರುವ ಪ್ರಮುಖ ಬೆಳವಣಿಗೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಇಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಲಾಯಿತು. ಆದರೆ ಮಹತ್ವದ ಸಭೆಗೆ ಮಾಜಿ ಸಚಿವ ಎಂ.ಬಿ ಪಾಟೀಲ್ , ಶಾಸಕ ಎಂ.ಟಿ.ಬಿ ನಾಗರಾಜ್ , ಸುಧಾಕರ್ ಸೇರಿದಂತೆ ಹಲವು ಶಾಸಕರು ಗೈರಾಗಿದ್ದರು.ಮಂತ್ರಿ ಸ್ಥಾನ ಸಿಗದ ಹಿನ್ನೆಲೆ ಸಿಟ್ಟಾಗಿರುವ ಎಂ.ಬಿ ಪಾಟೀಲ್ ಸಭೆಗೆ ಗೈರಾಗುವ ಮೂಲಕ ತಮ್ಮ ಆಕ್ರೋಶ ತೋರಿಸಿಕೊಂಡರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಗೆ ಕಾಂಗ್ರೆಸ್ ಶಾಸಕರೇ ಅಪಸ್ವರ ಎತ್ತಿದ್ದಾರೆ.ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು.ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ಎದುರೆ ಕೆಲ ಶಾಸಕರು ಬಜೆಟ್ ಬಗ್ಗೆ ಹರಿಹಾಯ್ದಿದ್ದಾರೆ ಎನ್ನಲಾಗಿದೆ. ಬಜೆಟ್ ನಲ್ಲಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕ ಕಡೆಗಣಿಸಿರುವ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಕೆಲ ಶಾಸಕರು, ಬಜೆಟ್ ಕೇವಲ ಹಾಸನ ಮಂಡ್ಯ ಮೈಸೂರು ಭಾಗಕ್ಕೆ ಸೇರಿದ್ದಾ? ಉತ್ತರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕಕ್ಕೆ ಬಜೆಟ್ ನಲ್ಲಿ ತಾರತಮ್ಯ ಮಾಡಿರುವುದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ನ ಯಾರ ಜೊತೆನೂ ಸಮಾಲೋಚನೆ ಮಾಡದೇ ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದಾರೆ
ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್, ರಾಹುಲ್ ಗಾಂಧಿ ವಿರೋಧ ಮಾಡ್ಕೊಂಡು ಬಂದಿದ್ದಾರೆ.ಹೀಗಿರುವಾಗ ಸಮ್ಮಿಶ್ರ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಮಾಡೋಕೆ ನಾವು ಸಮ್ಮತಿ ಸೂಚಿಸೋದು ಸರಿ ಇಲ್ಲ.ಪೆಟ್ರೋಲ್ ಮೇಲಿನ ಸೆಸ್ ಗೆ ಸರ್ಕಾರಕ್ಕೆ ಸಾವಿರ ಕೋಟಿ ಹೊರೆಯಾಗಬಹುದು.
ಹಾಗಂತ ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದು ಸರಿಯಿಲ್ಲ.ಇದನ್ನು ವಾಪಾಸ್ ಪಡೆಯಬೇಕು ಎಂದು ಹೆಚ್.ಕೆ ಪಾಟೀಲ್ ಸೇರಿದಂತೆ ಕೆಲ ಶಾಸಕರು ಒತ್ತಾಯಿಸಿದರು ಎನ್ನಲಾಗಿದೆ.ಈ ಬಗ್ಗೆ ಸಿಎಂ ಗಮನ ಸೆಳೆಯಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಅನ್ನಭಾಗ್ಯ ಯೋಜನೆಯಡಿ ಕೊಡ್ತಾ ಇದ್ದ ಏಳು ಕೆಜಿ ಅಕ್ಕಿಯನ್ನು ಕೊಡಬೇಕು.೨ ಕೆ.ಜಿ ಅಕ್ಕಿ ವಿತರಣೆ ಕಡಿತ ಮಾಡಿದ್ದು ಸರಿಯಲ್ಲ.ಇದು ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ.ಈಗ ಎರಡು ಕೆ.ಜಿ ಅಕ್ಕಿ ಕಡಿತ ಮಾಡಿದರೆ ಬಡಜನತೆಗೆ ಮೈತ್ರಿ ಸರ್ಕಾರದ ವಿರುದ್ದ ತಪ್ಪು ಸಂದೇಶ ರವಾನೆಯಾಗುತ್ತೆ.ನಾಳೆ ಬಜೆಟ್ ಮೇಲೆ ಸಿಎಂ ಉತ್ತರ ಕೊಡುವಾಗ ಇವೆಲ್ಲವನ್ನು ಹೇಳಬೇಕು.
ಈ ಬಗ್ಗೆ ಕಾಂಗ್ರೆಸ್ ನಾಯಕರು ಒಟ್ಟಾಗಿ ಸಿಎಂ ಗಮನಕ್ಕೆ ತರಬೇಕಿದೆ ಎಂದು ಹಲವು ಕಾಂಗ್ರೆಸ್ ಶಾಸಕರು ಸಭೆಯಲ್ಲಿ ಒತ್ತಾಯಿಸಿದರು ಎನ್ನಲಾಗಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುವುದಾಗಿ ಸಿದ್ದರಾಮಯ್ಯ ಸಭೆಯಲ್ಲಿ ಹೇಳಿದರು ಎನ್ನಲಾಗಿದೆ.

ವಿಧಾನಪರಿಷತ್ ಸಭಾಪತಿ ಸ್ಥಾನ ಜೆಡಿಎಸ್ ಗೆ ಬಿಟ್ಟುಕೊಡುವುದು ಬೇಡ. ಸಿಎಂ ಸ್ಥಾನ ಸೇರಿದಂತೆ ಪ್ರಮುಖ ಖಾತೆಗಳನ್ನೂ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದಾಯಿತು.ಈಗ ಸಭಾಪತಿ ಸ್ಥಾನವನ್ನೂ ಬಿಟ್ಟು ಕೊಟ್ಟರೆ ಹೇಗೆ? ನಮ್ಮಲ್ಲೂ ಅನೇಕ ಹಿರಿಯ ಪರಿಷತ್ ಸದಸ್ಯರಿದ್ದಾರೆ. ಯಾರಿಗಾದರೂ ಅವಕಾಶ ಮಾಡಿಕೊಡಿ ಎಂದು ಕೆಲ ಶಾಸಕರು ಸಭೆಯಲ್ಲಿ ಆಗ್ರಹಿಸಿದರು ಎನ್ನಲಾಗಿದೆ.

ಇನ್ನು ನಾಳೆ ಅಧಿವೇಶನಕ್ಕೆ ತೆರೆಬೀಳುವ ಕಾರಣ ,ಸರ್ಕಾರದ ಬಜೆಟ್ , ಹಾಗೂ ಪ್ರಮುಖ ಹಣಕಾಸು ವಿಧೇಯಕಗಳು ಅಂಗೀಕಾರ ಪಡೆದುಕೊಳ್ಳುವ ವೇಳೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಯಿತು

Avail Great Discounts on Amazon Today click here