ಸರ್ಕಾರಿ ಆಮಂತ್ರಣ ಪತ್ರಿಕೆಯಲ್ಲಿ ಕನ್ನಡದ ಕಗ್ಗೊಲೆ- ಕಾಟಾಚಾರಕ್ಕೆ ಕಾರ್ಯಕ್ರಮ ಸಂಘಟಿಸಿದ್ರಾ ಅಧಿಕಾರಿಗಳು?!

ಕರ್ನಾಟಕದಲ್ಲಿಯೇ ಕನ್ನಡ ಭಾಷೆಗೆ ಅವಮಾನದಂತಹ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ನಾಡಿನ ದೊರೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಳೆ ಬಾಗೀನ ಅರ್ಪಿಸಲಿದ್ದಾರೆ.
ಆದ್ರೆ ಆ ಕಾರ್ಯಕ್ರಮಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿದೆ. ಆದ್ರೆ ಆ ಆಮಂತ್ರಣ ಪತ್ರಿಕೆಯಲ್ಲಿ ಕನ್ನಡವನ್ನು ಕಗ್ಗೊಲೆ ಮಾಡಲಾಗಿದೆ. ಆಮಂತ್ರಣ ಪತ್ರಿಕೆಯ ಮುಖ ಪುಟದಿಂದಲೇ ಯಡವಟ್ಟುಗಳ ಮೇಲೆ ಯಡವಟ್ಟು ಮಾಡಿದ್ದಾರೆ. ಕೃಷ್ಣೆಯ ಜಲನಿಧಿಗೆ ಎಂದು ಮುದ್ರಿಸುವುದನ್ನು ಬಿಟ್ಟು ಜಲಧಿಗೆ ಎಂದು ಬರೆಯಲಾಗಿದೆ. ಇನ್ನು ಭಾಗೀನ ಎಂದಾಗಬೇಕಿದ್ದ ಒದ ಬಾಗೀನ ಎಂದು ಬರೆಯಲಾಗಿದೆ.

ಎರಡನೇ ಪುಟದಲ್ಲಿ ಗೌರವಾನ್ವಿತ ಅತಿಥಿಗಳು ಎಂಬ ಸಾಲಿನಲ್ಲಿ ಬಹುತೇಕ ಎಲ್ಲ ಶಾಸಕರ ಹೆಸ್ರುಗಳನ್ನು ತಪ್ಪು ತಪ್ಪಾಗಿ ಮುದ್ರಿಸಲಾಗಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಎಂದಾಗಬೇಕಿದ್ದ ಜಿಲಾ ಎಂದಾಗಿದೆ. ಶಾಸಕರು, ವಿಧಾನಸಭೆ ಎಂದು ಬರೆಯಬೇಕಿದ್ದಲ್ಲಿ ಮೀದಾನಸಭೆ ಎಂದಾಗಿದೆ. ಕೊನೆಯ ಪುಟದಲ್ಲಿ ಸಮಸ್ತ ರೈತರು ಎನ್ನುವ ಬದಲು ಸಸ್ತ ರೈತರು ಎಂದಾಗಿದೆ. ಜಲಸಂಪನ್ಮೂಲ‌ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶಸಿಂಗ್ ಅವರ ಹೆಸ್ರಿಗೆ ರಾಕೇಶಸಿಂ ಎಂದಾಗಿದೆ.
ಒಟ್ನಲ್ಲಿ ಕಾವೇರಿಗಷ್ಟೇ ಬಾಗೀನ ಅರ್ಪಿಸಿ ಸುಮ್ಮನಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತ್ಯೇಕ ರಾಜ್ಯದ ಕೂಗು ಎದ್ದ ಮೇಲೆ ಅದು ಕೃಷ್ಟಾ ಜಲಾಶಯ ಭರ್ತಿ ಆಗಿ 20 ದಿನಗಳ ಕಳೆದ ಬಳಿಕ ನಾಳೆ ಆಲಮಟ್ಟಿಗೆ ಬರುತ್ತಿದ್ದಾರೆ. ಆದ್ರೆ ಆ ಕಾರ್ಯಕ್ರಮ ಕೂಡ ಕಾಟಾಚಾರಕ್ಕೆ ನಡೆಸಲಾಗುತ್ತಿದೆ ಎಂಬುದಕ್ಕೆ‌ ಈ ಆಮಂತ್ರಣ ಪತ್ರಿಕೆಯೇ ಸಾಕ್ಷಿಯಾಗಿದೆ. ಈ ಬಗ್ಗೆ ವ್ಯಾಪಕವಾದ ಟೀಕೆಗಳು ವ್ಯಕ್ತವಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರೇ ಸ್ಪಷ್ಟಪಡಿಸಬೇಕಿದೆ…