ವರುಣಾದಲ್ಲಿ ಇಂದ್ರದ್ವಯರ ಕಾಳಗ !! ಸಿದ್ದರಾಮಯ್ಯ ಪುತ್ರನ ಎದುರು ಬಿಎಸ್ ವೈ ಪುತ್ರ ಸ್ಪರ್ಧೆ !!

BSY Son's Supporter Request to Amit Shah for Ticket to Varuna.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ವರುಣಾದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಪ್ರಯತ್ನ ಆರಂಭವಾಗಿದೆ.

ಇಂದು ಮೈಸೂರು ಜಿಲ್ಲಾ ಬಿಜೆಪಿ ಮುಖಂಡರು ವರುಣಾಕ್ಕೆ ಬಿ ವೈ ವಿಜಯೇಂದ್ರರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂದು ಅಮಿತ್ ಷಾಗೆ ಮನವಿ ಮಾಡಿದರು.ಈ ಬಾರಿ ಸಿದ್ದರಾಮಯ್ಯ ಅವರು ವರುಣಾದಿಂದ ತಮ್ಮ ಪುತ್ರ ಯತೀಂದ್ರ ಅವರನ್ನು ಕಣಕ್ಕಿಳಿಸಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಲಸೆ ಹೋಗಿದ್ದಾರೆ. ವರುಣಾದಲ್ಲಿ ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಸ್ಪರ್ಧಿಸಲಿದ್ದಾರೆ.‌ಈಗಾಗಲೇ ತನ್ನ ಪುತ್ರನ ಪರ ಸಿಎಂ ಸಿದ್ದರಾಮಯ್ಯ ಪ್ರಚಾರ ಶುರು ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಬಿಜೆಪಿಯು ವರುಣಾ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಬೇಕು ಎಂಬುದು ಬಿಜೆಪಿಗರ ಆಗ್ರಹ.

ಆದರೆ, ವಿಜಯೇಂದ್ರ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಸಾಕಷ್ಟುಅನುಮಾನಗಳೂ ಇವೆ. ಪಕ್ಷದಲ್ಲಿ ಯಾರೇ ಆಗಿರಲಿ, ಅಪ್ಪ-ಮಕ್ಕಳಿಗೆ ಟಿಕೆಟ್‌ ನೀಡುವ ಬಗ್ಗೆ ಪಕ್ಷದ ವರಿಷ್ಠರು ಇದುವರೆಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.‌ ಪುತ್ರ ವಿಜಯೇಂದ್ರ ಅವರನ್ನು ಚುನಾವಣಾ ರಾಜಕೀಯಕ್ಕೆ ತರುವ ಬಗ್ಗೆ ಯಡಿಯೂರಪ್ಪ ಅವರಿಗೆ ವಿಶೇಷ ಒಲವೇನೂ ಇಲ್ಲ. ಹೀಗಾಗಿ ಈಗಲೂ ಯಡಿಯೂರಪ್ಪ ಅವರು ಪುತ್ರನ ಪರವಾಗಿ ಲಾಬಿ ನಡೆಸುತ್ತಿಲ್ಲ. ಆದರೆ, ಮೈಸೂರು ಜಿಲ್ಲೆಯ ಕೆಲವು ಮುಖಂಡರು ವಿಜಯೇಂದ್ರ ಅವರನ್ನು ಚುನಾವಣಾ ರಾಜಕಾರಣಕ್ಕೆ ಕರೆತರುವ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ವಿಜಯೇಂದ್ರ ಅವರ ಸಹಮತವೂ ಇದೆ.

ವರುಣಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮತಗಳೂ ನಿರ್ಣಾಯಕವಾಗಿವೆ. ಮೇಲಾಗಿ ವಾಲ್ಮೀಕಿ ಸಮುದಾಯದ ಮತಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಪರಿಶಿಷ್ಟಜಾತಿಯಲ್ಲಿ ಎಡಗೈ ಪಂಗಡದ ಬೆಂಬಲ ಸಿಗುವ ನಿರೀಕ್ಷೆಯಿದೆ. ಆದರೆ, ಇವೆಲ್ಲ ಮತಗಳನ್ನು ಸೆಳೆಯುವಂಥ ಪ್ರಬಲ ಅಭ್ಯರ್ಥಿಯ ಕೊರತೆ ಬಿಜೆಪಿಯನ್ನು ಕಾಡುತ್ತಿದೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಕಾ.ಪು.ಸಿದ್ದಲಿಂಗಸ್ವಾಮಿ ಅವರು ಸುಮಾರು 54 ಸಾವಿರ ಮತಗಳನ್ನು ಗಳಿಸಿದ್ದರು. ಆದರೆ, ಆ ವೇಳೆ ಬಿಜೆಪಿ ಅಭ್ಯರ್ಥಿ ಠೇವಣಿಯನ್ನೂ ಉಳಿಸಿಕೊಂಡಿರಲಿಲ್ಲ. ಈಗ ಸಿದ್ದರಾಮಯ್ಯ ಅವರು ಬಲಾಢ್ಯರಾಗಿರುವುದರಿಂದ ಸಿದ್ದಲಿಂಗಸ್ವಾಮಿ ಬದಲು ವಿಜಯೇಂದ್ರ ಅವರನ್ನೇ ಕಣಕ್ಕಿಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬುದು ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಣ್ಣ ವಾದ.ಇಂದು ಶಿವಣ್ಣ ಸೇರಿದಂತೆ ಬಿಜೆಪಿ ನಾಯಕರು ವಿಜಯೇಂದ್ರ ಪರ ಅಮಿತ್ ಷಾಗೆ ಮನವಿ ಸಲ್ಲಿಸಲಿದ್ದಾರೆ.