2018 ರಲ್ಲೂ ಮತ್ತೆ ಸಮ್ಮಿಶ್ರ ಸರ್ಕಾರ?- ಈ ಭಾನುವಾರ ಸಮೀಕ್ಷೆ ಹೇಳೋದೇನು?

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬುದರ ಬಗ್ಗೆ ಚರ್ಚೆ ರಂಗೇರಿದೆ. ಈ ಮಧ್ಯೆ 2018ರ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲಿದ್ದು, ಮತ್ತೊಮ್ಮೆ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂಬ ಸಮೀಕ್ಷಾ ವರದಿ ಪ್ರಕಟವಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಆತಂಕ ಶುರುವಾಗಿದೆ.
ಈ-ಭಾನುವಾರ ಪತ್ರಿಕೆಯಲ್ಲಿ ಖ್ಯಾತ ರಾಜಕೀಯ ವಿಶ್ಲೇಷಕ ಮಹದೇವ ಪ್ರಕಾಶ್​ 30 ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಸಿ 2018ರ ಭವಿಷ್ಯ ಬರೆದಿದ್ದು, ಒಟ್ಟು 224 ಕ್ಷೇತ್ರಗಳಲ್ಲಿ ಬಿಜೆಪಿ 95 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಕಾಂಗ್ರೆಸ್ 74 ಸ್ಥಾನ ಪಡೆದರೇ 52 ಸ್ಥಾನ ಪಡೆಯುವ ಜೆಡಿಎಸ್​ ಮತ್ತೆ ಕಿಂಗ್​ಮೇಕರ್​​ ಆಗಲಿದೆ ಎಂದು ಸಮೀಕ್ಷೆ ದಾಖಲಿಸಿದೆ.

ದಕ್ಷಿಣ ಕರ್ನಾಟಕದಲ್ಲಿ ದಳಪತಿಗಳು ಕಮಾಲ್​ ಮಾಡಲಿದ್ದು, ಜೆಡಿಎಸ್​ಗೆ 39, ಬಿಜೆಪಿಗೆ 25, ಕಾಂಗ್ರೆಸ್​ಗೆ 24, ಇತರರಿಗೆ ಒಂದು ಕ್ಷೇತ್ರ ದೊರೆಯಲಿದೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಹಿಡಿತ ಉಳಿಸಿಕೊಳ್ಳಲಿದ್ದು, ಬಿಜೆಪಿಗೆ 14, ಕಾಂಗ್ರೆಸ್​ಗೆ 9 ಮತ್ತು ಜೆಡಿಎಸ್​ಗೆ 5 ಕ್ಷೇತ್ರ ದೊರೆಯಲಿದೆ ಎನ್ನುತ್ತದೆ ಪತ್ರಿಕೆ ಸಮೀಕ್ಷೆ.

ಇನ್ನು ಉತ್ತರ ಕರ್ನಾಟಕದ 90 ಕ್ಷೇತ್ರಗಳಲ್ಲಿ ಬಿಜೆಪಿಯೇ ಅಧಿಪತ್ಯ ಸಾಧಿಸಲಿದ್ದು, ಬಿಜೆಪಿಗೆ 43, ಕಾಂಗ್ರೆಸ್​ಗೆ 36, ಜೆಡಿಎಸ್​ಗೆ 9, ಇತರರಿಗೆ 2 ಸ್ಥಾನ. ಕರಾವಳಿ ಮಧ್ಯ-ಕರ್ನಾಟಕದ 45 ಕ್ಷೇತ್ರಗಳಲ್ಲಿ ಬಿಜೆಪಿಗೆ 27 ಸ್ಥಾನ
ಕಾಂಗ್ರೆಸ್​ಗೆ 14 ಕ್ಷೇತ್ರ, ಜೆಡಿಎಸ್​ಗೆ 4 ಸ್ಥಾನ ಸಿಗುವ ಮುನ್ಸೂಚನೆ ಇದೆ. ಒಟ್ಟಿನಲ್ಲಿ 2018 ರ ಚುನಾವಣೆಯೂ ರಾಜ್ಯದಲ್ಲಿ ಮತ್ತೆ ಅತಂತ್ರ ಆಡಳಿತ ವ್ಯವಸ್ಥೆ ಹುಟ್ಟುಹಾಕುವ ಸಾಧ್ಯತೆ ಇದ್ದು, ರಾಜ್ಯದ ಜನತೆಗೆ ಮತ್ತೊಮ್ಮೆ ಮೈತ್ರಿ ರಾಜಕಾರಣ ಹಾಗೂ ಸಮ್ಮಿಶ್ರ ಸರ್ಕಾರವನ್ನು ನೋಡುವ ಸ್ಥಿತಿ ಎದುರಾಗಲಿದ್ದು, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.

1 ಕಾಮೆಂಟ್

Comments are closed.