ಗೌರಿ ಲಂಕೇಶ್ ಹತ್ಯೆಕೋರರ ಬಂಧನ ಸನ್ನಿಹಿತ!! ಗೃಹಸಚಿವ ರಾಮಲಿಂಗರೆಡ್ಡಿ ಹೇಳಿಕೆ

ಕೆಲ ವಾರಗಳಲ್ಲಿ ಗೌರಿ ಲಂಕೇಶ್ ಹಂತಕರ ಬಂಧನವಾಗಲಿದೆ ಎಂದು ಗೃಹ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ. ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾ ಸಂವಾದದಲ್ಲಿ ರಾಮಲಿಂಗ ರೆಡ್ಡಿ ಮಾತನಾಡುತ್ತಿದ್ದರು. ಗೌರಿ ಲಂಕೇಶ್ ಹತ್ಯೆ ಯಾರು ಮಾಡಿದ್ದಾರೆ ಎಂದು‌ ಗೊತ್ತಿದೆ, ಕೆಲವೇ ವಾರಗಳಲ್ಲಿ ಹಂತಕರನ್ನ ಬಂಧಿಸಲಾಗುತ್ತದೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು. ಎಸ್ಐಟಿ ಯಿಂದ ನನಗೆ ಮಾಹಿತಿ ಸಿಕ್ಕಿದೆ, ನೂರಕ್ಕೆ ನೂರರಷ್ಟು ಪ್ರತಿಶತ ಹಂತಕರು ಸಿಗಲಿದ್ದಾರೆ. ಪನ್ಸಾರೆ,ದಾಬೋಲ್ಕರ್,ಕಲಬುರ್ಗಿ ಹಂತಕರು ಸಿಕ್ಕಿಲ್ಲ. ಆದರೆ ನಮ್ಮ ಎಸ್ಐಟಿ ತನಿಖೆ ಪ್ರಗತಿಯಲ್ಲಿದೆ. ಸಾಕ್ಷಿಗಾಗಿ ವಿಳಂಬವಾಗುತ್ತಿದೆ ಅಷ್ಟೇ ಎಂದರು.

ಗೌರಿ ನಿವಾಸದ ಸಿಸಿಟಿವಿಯಲ್ಲಿ ಶೂಟ್ ಮಾಡುವಾಗ ವ್ಯಕ್ತಿ ಹೆಲ್ಮೆಟ್ ಧರಿಸಿದ್ದ. ಆದರೆ ಅಂದು ಮಧ್ಯಾಹ್ನ ಹೆಲ್ಮೆಟ್ ಇಲ್ಲದ ಸಾಕಷ್ಟು ಚಿತ್ರಗಳಿವೆ ಎಂದು ಗೃಹ ಸಚಿವರು ಹೇಳಿದರು. ಗೌರಿ ಹಂತಕರ ರೇಖಾ ಚಿತ್ರದಲ್ಲಿ ಕುಂಕುಮದಾರಿಯ ಚಿತ್ರ ವಿವಾದದ ಬಗ್ಗೆಯೂ ರೆಡ್ಡಿ ಸ್ಪಷ್ಟನೆ ನೀಡಿದ್ರು. ಹೈವಿಟ್ನೆಸ್ ಏನು ಹೇಳುತ್ತಾರೋ ಹಾಗೆ ರೇಖಾಚಿತ್ರ ಬಿಡಿಸಲಾಗಿದೆ ಎಂದು ಹಂತಕನ ರೇಖಾಚಿತ್ರದಲ್ಲಿ ತಿಲಕವಿರುವುದನ್ನು ಸಮರ್ಥನೆ ಮಾಡಿಕೊಂಡರು.