“ಚುನಾವಣಾ ಕುರುಕ್ಷೇತ್ರ” 2018 – “ಟಿ. ನರಸಿಪುರ” !

Kurukshetra:Political Parties Preparation of 2018 Assembly Election.( T.Narsipur)
Kurukshetra:Political Parties Preparation of 2018 Assembly Election.( T.Narsipur)

                                                       ಟಿ ನರಸಿಪುರ ವಿಧಾನಸಭಾ ಕ್ಷೇತ್ರ

ad


ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಟಿ ನರಸೀಪುರ ವಿಧಾನಸಭಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಸಚಿವರಾಗಿರೋ ಮಹದೇವಪ್ಪ ಇಲ್ಲಿನ ಶಾಸಕರು. ಆದ್ರೆ ಈ ಬಾರಿ ತಮ್ಮ ಬದಲಿಗೆ ಪುತ್ರನನ್ನು ಕಣಕ್ಕಿಳಿಸೋದಕ್ಕೆ ಮುಂದಾಗಿರೋದ್ರಿಂದಈ ಬಾರಿಯ ಇಲ್ಲಿನ ರಣಕಣ ಹೇಗಿರತ್ತೆ ಅನ್ನೋ ಕುತೂಹಲ ಮೂಡಿದೆ. ಆ ಬಗ್ಗೆ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

 

ಟಿ ನರಸಿಪುರ ವಿಧಾನಸಭಾ ಕ್ಷೇತ್ರ. ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಪ್ರತಿಷ್ಟಿತ ಕ್ಷೇತ್ರಗಳಲ್ಲಿ ಒಂದು. ತಲಕಾಡು ಪಂಚಲಿಂಗ ದರ್ಶನ, ಕುಂಭಮೇಳ, ತ್ರಿವೇಣಿ ಸಂಗಮದಂತಹ ಧಾರ್ಮಿ ಕಾರ್ಯಕ್ರಮಗಳು ನಡೆಯುವ ಪುಣ್ಯ ಕ್ಷೇತ್ರ ಜತೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸೋ ಕಾರಣ ಪ್ರಸಿದ್ಧ ಪ್ರವಾಸಿ ತಾಣವೂ ಹೌದು.

ಜತೆಗೆ ಅತೀ ಹೆಚ್ಚು ಶಿಕ್ಷಕರು ಇರೋ ಕ್ಷೇತ್ರ ಅನ್ನೋ ಹೆಗ್ಗಳಿಕೆಗೂ ಕೂಡಾ ಇದು ಪಾತ್ರವಾಗಿದೆ. ಹೀಗೇ ಇಲ್ಲಿನ ವಿಶೇಷತೆಗಳು ಹೇಳ್ತಾ ಹೋದ್ರೆ ಸಾಕಷ್ಟು ವಿಚಾರಗಳು ಸಿಗುತ್ತವೆ. ಆದ್ರೆ 2018ರ ಮಹಾ ಚುನಾವಣೆ ಹತ್ತಿರ ಬರ್ತಾ ಇರೋದ್ರಿಂದ ಈ ಸಂದರ್ಭದಲ್ಲಿ ನಾವು ಹೇಳೋದಕ್ಕೆ ಹೊರಟಿರೋದು ಟಿ ನರಸಿಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ಸ್ಥಿತಿ ಗತಿ ಬಗ್ಗೆ. ಇಲ್ಲಾಗ್ತಿರೋ ರಾಜಕೀಯ ಬೆಳವಣಿಗೆ ಹಾಗೂ ಬದಲಾವಣೆಯ ಬಗ್ಗೆ. ಹೌದು ಈ ಕ್ಷೇತ್ರದಲ್ಲಿ ಈಗಾಗಲೇ ರಾಜಕೀಯ ಬಿರುಗಳಿ ಬೀಸ್ತಿದೆ. ಚುನಾವಣಾ ಕಾವು ಜೋರಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜಿದ್ದಿಗೆ ಬಿದ್ದಂತೆ ರಣತಂತ್ರಗಳನ್ನು ರೂಪಿಸುತ್ತಿವೆ.

ಕಳೆದ ಮೂರು ಬಾರಿ ಸತತವಾಗಿ ಹಾಗೂ ಒಟ್ಟು 5 ಬಾರಿ ಗೆದ್ದಿರೋ ಡಾ.ಹೆಚ್.ಸಿ.ಮಹದೇವಪ್ಪ ಈ ಬಾರಿ ಸಿದ್ದರಾಮಯ್ಯ ಸಂಪುಟದಲ್ಲಿ ಬಾರಿ ಖಾತೆಯನ್ನೇ ಬಾಚಿಕೊಂಡಿದ್ದಾರೆ. ಅವ್ರೇನಾದ್ರೂ ಇದೇ ಕ್ಷೇತ್ರದಿಂದ ಕಣಕ್ಕಿಳಿಯೋದಕ್ಕೆ ಮುಂದಾದ್ರೆ ಚುನಾವಣಾ ಕಾವು ಇನ್ನೂ ರಂಗೇರುತ್ತಿತ್ತು. ಆದ್ರೆ ಈ ಬಾರಿ ಅವ್ರು ಬೆಂಗಳೂರಿನ ಸಿವಿ ರಾಮನ್ ನಗರದಿಂದ ಸ್ಪರ್ಧಿಸೋದಕ್ಕೆ ಮುಂದಾಗಿದ್ದಾರೆ ಅನ್ನೋದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗ್ತಿದ್ದು ಇಲ್ಲಿ ಅವ್ರ ಪುತ್ರನನ್ನು ಕಣಕ್ಕಿಳಿಸೋದಕ್ಕೆ ಮುಂದಾಗಿದ್ದಾರೆ. ಕಳೆದ ಬಾರಿ ಜೆಡಿಎಸ್ ಕೇವಲ320 ಮತಗಳಿಂದ ಕ್ಷೇತ್ರದಲ್ಲಿ ಸೋತಿತ್ತು. ಹಾಗಾಗಿ ಈ ಬಾರಿ ಹೊಸಮುಖವನ್ನು ಮುಂದಿಟ್ಕೊಂಡು ಜೆಡಿಎಸ್ ಗೆಲ್ಲೋದಕ್ಕೆ ಮಾಸ್ಟರ್ ಪ್ಲಾನ್ ಮಾಡಿದೆ. ಬಿಜೆಪಿ ಕೂಡಾ ಗೆಲುವಿಗೆ ರಣತಂತ್ರವನ್ನು ರೂಪಿಸ್ತಿದೆ. ಇದೆಲ್ಲದರ ಬಗ್ಗೆ ಹೇಳ್ತೀವಿ .ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

 

ಇದು 2013ರ ಮತಬರಹ. ಕಾಂಗ್ರೆಸ್ ನಿಂದ ಕಣದಲ್ಲಿದ್ದ ಡಾ. ಹೆಚ್ ಸಿ ಮಹದೇವಪ್ಪನವರು 53219 ಮತಗಳನ್ನು ಪಡೆದ್ರೆ ಅವ್ರಿಗೆ ತೀವ್ರ ಫೈಟ್ ಕೊಟ್ಟ ಜೆಡಿಎಸ್ ನ ಎಂಸಿ ಸುಂದರೇಶನ್ ಅವ್ರು 52896 ಮತಗಳನ್ನು ಪಡೆಯೋದ್ರ ಮೂಲಕ ಕೇವಲ 326 ಮತಗಳಿಂದ ಸೋತ್ರು

ಹೌದು 5 ಬಾರಿ ಇದೇ ಕ್ಷೇತ್ರದಿಂದ ಗೆದ್ದಿರೋ ಮಹದೇವಪ್ಪನವರಿಗೆ ಈ ಕ್ಷೇತ್ರದ ಮೇಲೆ ಹಿಡಿತ ಇತ್ತು. ಆದ್ರೆ ಅದು ಬರಬರತ್ತಾ ಕಡಿಮೆ ಆಯ್ತು ಅನ್ನೋದಕ್ಕೆ ಕಳೆದ ಬಾರಿ ಎದುರಾದ ಟಫ್ ಫೈಟ್ ಹಾಗೂ ಕಡಿಮೆ ಅಂತರದ ಗೆಲುವೇ ಉದಾಹರಣೆ. ಈ ಬಾರಿ ಫ್ರಭಾವಿ ಖಾತೆಯನ್ನು ಹೊಂದಿದ್ರೂ ಕೂಡಾ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇರೋದು ಸ್ವತಃ ಮಹದೇವಪ್ಪನವರಿಗೂ ಗೊತ್ತಾಗಿದೆ. ಹಾಗಾಗಿ ಅದೇ ಕಾರಣಕ್ಕೋ ಅಥವಾ ತಮ್ಮ ಪುತ್ರನ್ನು ರಾಜಕೀಯಕ್ಕೆ ತರಬೇಕು ಅನ್ನೋ ಉದ್ದೇಶಕ್ಕೋ ಮಹದೇವಪ್ಪನವರು ಕ್ಷೇತ್ರ ಬಿಟ್ಟು ಬೆಂಗಳೂರಿನ ಸಿವಿ ರಾಮನ್ ನಗರಕ್ಕೆ ಹಾರೋದು ಖಚಿತ ಅಂತಿದ್ದಾರೆ ಅವ್ರ ಜತೆಗಿರೋರು.

ಈ ಬಾರಿ ಮಹದೇವಪ್ಪನವರು ಕ್ಷೇತ್ರದಲ್ಲಿ ಚುನಾವಣೆಗೆ ನಿಂತ್ರೆ ಸಚಿವರು ಅನ್ನೋ ಕಾರಣಕ್ಕೆ ಕ್ಷೇತ್ರದ ಜನ ಸ್ವಲ್ಪ ಸಪೋರ್ಟ್ ಮಾಡ್ತಿದ್ರೇನೋ ಆದ್ರೆ ಪುತ್ರನನ್ನು ಕಣಕ್ಕಿಳಿಸೋದಕ್ಕೆ ಮುಂದಾಗಿರೋದ್ರಿಂದ ಕುಟುಂಬ ರಾಜಕಾರಣ ಅಂತಾ ಜನ ತಿರಸ್ಕರಿಸೋ ಚಾನ್ಸ್ ಜಾಸ್ತಿ ಇದೆ. ಇನ್ನು ಜೆಡಿಎಸ್ ಅಂತೂ ಈ ಬಾರಿ ಬಹಳ ಪ್ರಯತ್ನ ಮಾಡ್ತಿದೆ. ಕಳೆದ ಬಾರಿ ಫೈಟ್ ಕೊಟ್ಟಿದ್ದ ಸುಂದರೇಶನ್ ಅವ್ರು ನಿಧನರಾಗಿದ್ದಾರೆ. ಹಾಗಾಗಿ ಜೆಡಿಎಸ್ ಹೊಸ ಮುಖವನ್ನು ಅಖಾಡಕ್ಕಿಳಿಸಿಲು ಮುಂದಾಗಿದೆ. ಬಿಜೆಪಿ ಕೂಡಾ ಕಾಂಗ್ರೆಸ್ ಜೆಡಿಎಸ್ ಫೈಟ್ ನಲ್ಲಿ ಏನು ಲಾಭ ಮಾಡಿಕೊಳ್ಳಬಹುದು ಅಂತಾ ಯೋಚನೆ ಮಾಡ್ತಿದೆ. ಬನ್ನಿ ಹಾಗಿದ್ರೆ ಕ್ಷೇತ್ರದಲ್ಲಿ ಈ ಬಾರಿ ಸೆಣಸಾಡೋ ರಣ ಕಲಿಗಳ್ಯಾರು? ಅವ್ರ ಸಾಮರ್ಥ್ಯವೇನು ಅನ್ನೋದನ್ನು ನೋಡೋಣ.

ಕಾಂಗ್ರೆಸ್ ಅಭ್ಯರ್ಥಿ

ಸುನೀಲ್ ಬೋಸ್, ಅಭ್ಯರ್ಥಿ

ಸಚಿವ ಮಹದೇವಪ್ಪನವರ ಪುತ್ರ ಸುನೀಲ್ ಬೋಸ್ ಈ ಬಾರಿ ಟಿ ನರಸಿಪುರ ಕ್ಷೇತ್ರದಿಂದ ಕಣಕ್ಕಿಳಿತಾರೆ ಅನ್ನೋ ಮಾತು ಬಹಳ ತಿಂಗಳುಗಳಿಂದಲೇ ಕೇಳಿ ಬರ್ತಿದ್ದು ಈಗ ಕನ್ಫರ್ಮ್ ಆಗ್ತಾ ಇದೆ.

ಈ ಹಿಂದಿನಂದಲೇ ಸಾಕಷ್ಟು ಬಾರಿ ಸುನೀಲ್ ಬೋಸ್ ತನ್ನ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ ಹಾಕಿಸೋದ್ರ ಮೂಲಕ ಜನರನ್ನು ತನ್ನತ್ತ ಸೆಳೆಯೋದ್ರ ಜತೆಗ ತಾನೇ ಈ ಬಾರಿ ಇಲ್ಲಿಂದ ಕಣಕ್ಕಿಳಿತೇನೆ ಅನ್ನೋ ಸಂದೇಶ್ ರವಾನಿಸಿದ್ದಾರೆ. ಇನ್ನು ಟಿಕೆಟ್ ಘೋಷಣೆ ಆಗಿಲ್ಲ ಆದ್ರೆ ಅದಕ್ಕಿಂತ ಮುಂಚೇನೇ ತಾನು ಸಚಿವರ ಪುತ್ರ. ಹಾಗೂ ಈ ಬಾರಿ ಕ್ಯಾಂಡಿಡೇಟ್ ಅನ್ನೋ ಭಾವನೆ ಸುನೀಲ್ ಬೋಸ್ ಗೆ ಬಂದಂತಿದ್ದು ಅಪ್ಪನ ಹೆಸರಲ್ಲಿ ಮಗನೇ ದರ್ಬಾರ್ ಮಾಡ್ತಿದ್ದಾನಂತೆ.

ಇನ್ನು ಸತತ 3 ಬಾರಿ ಗೆದ್ದಿರೋ ಮಹದೇವಪ್ಪನವರು ಸಚಿವರಾದ ಮೇಲೆ ತಮ್ಮ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಅನ್ನೋದರ ಮೇರೆಗೆ ಜನ ಈ ಬಾರಿ ಕಾಂಗ್ರೆಸ್ ಗೆ ಮತ ಹಾಕ್ತಾರೆ ಅನ್ನೋದು ಖಚಿತ. ಆದ್ರೆ ಅಂತಹ ಪ್ರಭಾವಿ ಖಾತೆಯನ್ನು ಮಹದೇವಪ್ಪನವರು ಹೊಂದಿದ್ದರೂ ಕೂಡಾ ಇಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ. ರಸ್ತೆಗಳನ್ನು ಹೊರತುಪಡಿಸಿ ಕ್ಷೇತ್ರಕ್ಕೆ ಮಾಡಿರುವ ಕೆಲಸ ಅಷ್ಟಕಷ್ಟೆ. ಈ ಕ್ಷೇತ್ರದ ಅದೆಷ್ಟೋ ಕಡೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹಾಗೇ ಇದೆ. ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಇದೆಲ್ಲದರ ಜತೆಗೆ ಸಚಿವ ಮಹದೇವಪ್ಪ ಹಾಗೂ ಅವ್ರ ಪುತ್ರ ಸುನೀಲ್ ಬೋಸ್ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿವೆ.

ಕ್ಷೇತ್ರ ಅಭಿವೃದ್ಧಿಯಿಂದ ಸದ್ದಾಗಬೇಕಿತ್ತು ಆದ್ರೆ ಇಲ್ಲಿ ಬರಿ ಅಕ್ರಮಗಳೇ ಸದ್ದು ಮಾಡ್ತಿವೆ. ಅಕ್ರಮ ಮರಳು ಗಣಿಗಾರಿಕೆಯಲ್ಲಂತೂ ಸುನೀಲ್ ಬೋಸ್ ಹೆಸರು ಥಳುಕು ಹಾಕಿಕೊಂಡಿರೋದು ಇಡೀ ರಾಜ್ಯದ ಜನರಿಗೆ ಗೊತ್ತು. ಇದೇ ಕಾರಣದಿಂದ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಅಧಿಕವಾಗಿದೆ. ಹಾಗಾಗಿ ಸುನೀಲ್ ಬೋಸ್ ಈ ಬಾರಿ ಇಲ್ಲಿ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ.  ಇನ್ನು ಒಂದ್ವೇಳೆ ಕೈ ಹೈಕಮಾಂಡ್ ತಂದೆ ಮಗ ಇಬ್ಬರಿಗೂ ಟಿಕೆಟ್ ಕೊಡೋದಿಕ್ಕಾಗಲ್ಲ ಅಂದ್ರೆ   ಮಹದೇವಪ್ಪನವರು ಯೂ ಟರ್ನ್ ಹೊಡೆದು ತಾನೇ ಟಿ ನರಸಿಪುರ ಕ್ಷೇತ್ರದಿಂದ ಕಣಕ್ಕಿಳಿಯೋ ಸಾಧ್ಯತೆ ಇದೆ. ಹಾಗಿದ್ರೂ ಕೂಡಾ ಈ ಬಾರಿ ಗೆಲುವು ತಂದೆ ಆಗಲಿ ಮಗನಿಗಾಗಲಿ ಕಷ್ಟ ಅಂತಿದ್ದಾರೆ ಇಲ್ಲಿನ ಜನ.

ತೆನೆ ಹೊರೋದ್ಯಾರು?

ಅಶ್ವಿನ್, ಅಭ್ಯರ್ಥಿ

ಕಳೆದ ಬಾರಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ಮಹದೇವಪ್ಪನವರಿಗೆ ಟಫ್ ಫೈಟ್ ಕೊಟ್ಟ ಎಂಸಿ ಸುಂದರೇಶನ್ ನಿಧನರಾಗಿದ್ದಾರೆ. ಹಾಗಾಗಿ ಜೆಡಿಎಸ್ ಈ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯ ಅಶ್ವಿನ್ ಅವ್ರನ್ನು ಅಭ್ಯರ್ಥಿ ಅಂತಾ ಘೋಷಣೆ ಮಾಡಿದೆ.

ಇದೇ ಕ್ಷೇತ್ರದ  ವ್ಯಾಪ್ತಿಯಲ್ಲಿರೋ ಸೋಮನಾಥಪುರದಿಂದ ಜಿಲ್ಲಾಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿರೋ ಅಶ್ವಿನ್ ಭರವಸೆಯ ಯುವ ನಾಯಕ ಅನ್ನೋದ್ರಲ್ಲಿ ಅನುಮಾನ ಇಲ್ಲ.

ಹೇಳಿ ಕೇಳಿ ಜೆಡಿಎಸ್ ಪ್ರಾಬಲ್ಯ ಇರೋ ಈ ಭಾಗದಲ್ಲಿ ಅಶ್ವಿನ್ ಹವಾ ಕೂಡಾ ಅಷ್ಟೇ ಜೋರಾಗಿದೆ. ಕಳೆದ ಬಾರಿ 326 ಮತಗಳಿಂದ ಸೋತಿದ್ದ ಸುಂದರೇಶನ್ ನಿಧನದಿಂದಾಗಿ ಕ್ಷೇತ್ರದ ಜನರಿಗೆ ಜೆಡಿಎಸ್ ಮೇಲೆ ಅನುಕಂಪದ ಅಲೆ ಇದೆ. ಕಳೆದ ಬಾರಿಯೇ ಜೆಡಿಎಸ್ ನ್ನು ಗೆಲ್ಲಿಸಬಹುದಾಗಿತ್ತು ಅಂತಾ ಇಲ್ಲಿನವರು ಮಾತಾಡ್ತಿದ್ದಾರೆ. ಹಾಗಾಗಿ ಇದು ಈ ಬಾರಿ ಅಶ್ವಿನ್ ಅವ್ರಿಗೆ ಪ್ಲಸ್ ಪಾಯಿಂಟ್. ಇನ್ನು ಇದೆಲ್ಲದರ ಜತೆಗೆ ಕ್ಷೇತ್ರದಲ್ಲಿ ಸಚಿವ ಹಾಗೂ ಅವರ ಪುತ್ರನ ವಿರುದ್ಧ ವ್ಯಾಪಕ ಆಕ್ರೋಶವಿದ್ದು, ಅಪ್ಪ-ಮಗನ ದರ್ಬಾರ್​ಗೆ ಕೊನೆ ಹಾಡಲೇ ಬೇಕು ಅಂತಾ ಇಲ್ಲಿನ ಜನ ಮುಂದಾದ್ರೆ ಜೆಡಿಎಸ್ ಗೆಲುವು ಕಷ್ಚವೇನಲ್ಲ.

ಅಶ್ವಿನ್ ಇದೇ ಮೊದಲ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡ್ತಿದ್ರೂ ಸಹ ಈ ಹಿಂದಿನಿಂದಲೂ ಕ್ಷೇತ್ರದ ಜನರಿಗೆ ಸ್ಪಂದಿಸ್ತಾ. ಕ್ಷೇತ್ರದಾದ್ಯಂತ ಓಡಾಡ್ತಾ ಪಕ್ಷ ಸಂಘಟನೆ ಮಾಡೋದ್ರ ಮೂಲಕ ಜೆಡಿಎಸ್ ನ ಯುವ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಅವ್ರ ಹವಾ ಜೋರಾಗ್ತಾ ಇರೋದು ನೋಡಿದ್ರೆ ಸಚಿವರ ಮಗ ಸುನಿಲ್ ಬೋಸಲ್ ಅಲ್ಲ ಸ್ವತಃ ಸಚಿವರೇ ನಿಂತ್ರೂ ಕೂಡಾ ಈ ಬಾರಿ ಸೋಲೋ ಹಾಗೇ ಕಾಣ್ತಿದೆ.   ಸಿದ್ದರಾಮಯ್ಯನವರ ಹವಾ ಇಲ್ಲಿ ಜೋರಾಗಿರುವಾಗಲೇ ಕಡಿಮೆ ಅಂತರದಿಂದ ಗೆದ್ದ ಮಹದೇವಪ್ಪನವರು ಕ್ಷೇತ್ರಕ್ಕೆ ಮಹತ್ವ ಕೊಡುಗೆ ನೀಡುವುದರಲ್ಲಿ, ಮತದಾರರ ವಿಶ್ವಾಸ ಸಂಪಾದಿಸುವುದರಲ್ಲಿ ಸೋತಿರೋದ್ರಿಂದ ಜೆಡಿಎಸ್​ ಗೆ ಈ ಬಾರಿ ಪ್ಲಸ್​ ಪಾಯಿಂಟ್.

ಕಮಲ ಮುಡಿಯೋರ್ಯಾರು?

ಟಿ ನರಸಿಪುರ ಕ್ಷೇತ್ರದಲ್ಲಿ ಬಿಜೆಪಿ ಹವಾ ಅಷ್ಟೊಂದು ಇಲ್ಲದೇ ಇದ್ರೂ ಕೂಡಾ ಜೆಡಿಎಸ್ ಕಾಂಗ್ರೆಸ್ ಫೈಟ್ ನ ಲಾಭ ಪಡೆಯೋದಕ್ಕೆ ಬಿಜೆಪಿ ಮುಂದಾಗಿದೆ.

ಆದ್ರೆ ಒಂದಷ್ಟು ಗೊದಲಗಳ ಮಧ್ಯೆಯೇ ಡಾ ಎಲ್ ಭಾರತಿ ಶಂಕರ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ನೂತನ್ ನಡುವೆ ಟಿಕೆಟ್ ಗಾಗಿ ಪ್ರಬಲ ಸ್ಪರ್ಧೆ ಇದೆ. 1999ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಾ. ಭಾರತೀಶಂಕರ್​, ಮಹದೇವಪ್ಪ ಅವರನ್ನು ಸೋಲಿಸಿದ್ದರು. ಹಾಗಾಗಿ ಈ ಬಾರಿ ಮತ್ತೆ ಟಿಕೆಟ್ ಆಕಾಂಕ್ಷಿಯಾಗಿದ್ದರೆ ಅದೇ ರೀತಿ ಟಿ ನರಸಿಪುರ ಭಾಗದವರೇ ಆದ ನೂತನ್​ ಕೂಡ ಟಿಕೆಟ್​ ಗಿಟ್ಟಿಸಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಇಲ್ಲಿ ಬಿಜೆಪಿಯಿಂದ ನೂತನ್​ಗೆ ಟಿಕೆಟ್​ ನೀಡಿದ್ದೇ ಆದರೆ ಜೆಡಿಎಸ್​ ಜೊತೆಗೆ ಬಿಜೆಪಿ ಕೂಡ ಪೈಪೋಟಿ ಕೊಡಲಿದೆ ಅಂತಾನೇ ಹೇಳಲಾಗ್ತಿದೆ.

ಟಿ ನರಸಿಪುರ ಕ್ಷೇತ್ರದಲ್ಲಿ ಒಟ್ಟು 1 ಲಕ್ಷದ 92 ಸಾವಿರ ಮತದಾರರಿದ್ದಾರೆ. ಅವ್ರಲ್ಲಿ ದಲಿತರು ಸುಮಾರು 52 ಸಾವಿರದಷ್ಟಿದ್ದರೆ ಒಕ್ಕಲಿಗರೂ ಕೂಡಾ 50 ಸಾವಿರದಷ್ಟಿದ್ದಾರೆ.

ಹಾಗಾಗಿ ಇವ್ರೇ ಇಲ್ಲಿ ನಿರ್ಣಾಯಕ ಮತದಾರರು. ಹಾಗಾಗಿ ಕುಮಾರ ಸ್ವಾಮಿ ಅವ್ರನ್ನು ಈ ಬಾರಿ ಸಿಎಂ ಮಾಡಲೇ ಬೇಕು ಅಂತಾ ಇಲ್ಲಿನ ಒಕ್ಕಲಿಗ ಮತದಾರರು ಹೊರಟಿದ್ದೇ ಆದಲ್ಲಿ ಜೆಡಿಎಸ್ ನ ಅಶ್ವಿನ್ ವಿಜಯಪತಾಕೆ ಹಾರಿಸೋದ್ರಲ್ಲಿ ಡೌಟ್ ಇಲ್ಲ. ಇನ್ನು ಸಚಿವ ಮಹದೇವಪ್ಪನರು ಈ ಕ್ಷೇತ್ರಕ್ಕೆ ನೆಪ ಮಾತ್ರದ ಶಾಸಕ. ಅವರ ಎಲ್ಲಾ ಅಧಿಕಾರವನ್ನು ಮಗ ಸುನೀಲ್ ಬೋಸ್ ಚಲಾಯಿಸುತ್ತಾರೆ. ಅಂತಾ ಮತದಾರರು ಹೇಳ್ತಿದ್ದಾರೆ. ಇಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಗೆ ಚಾಲನೆ ಕೊಡುತ್ತಾ ನಾನೇ ಈ ಕ್ಷೇತ್ರದ ಶಾಸಕ ಅಂತಾ ಫೋಸ್​ ಕೊಡುತ್ತಿರೋ ಸುನಿಲ್​ ಬೋಸ್​ ಜನರ ವಿರೋಧಕ್ಕೂ ತುತ್ತಾಗಿದ್ದಾರೆ. ಅಕ್ರಮ ಮರಳು ದಂಧೆ ವಿಚಾರದಲ್ಲಿ ಇವ್ರ ಹೆಸರು ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು. ಲಂಚ ಪಡೆಯುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮೇಲೆ ಒತ್ತಡ ಹಾಕಿದ ಪ್ರಕರಣದಲ್ಲಿ ಸುನಿಲ್​ ಬೋಸ್​ ಕ್ರಿಮಿನಲ್​ ಪ್ರಕರಣ ಕೂಡಾ ಎದುರಿಸುತ್ತಿದ್ದಾರೆ. ಹಾಗೇನೇ ಟಿ ನರಸೀಪುರದಲ್ಲಿ ತಹಸೀಲ್ದಾರ್ ಆತ್ಮಹತ್ಯೆ ಪ್ರಕರಣದ್ಲಲೂ ಇವ್ರ ಹೆಸರು ಕೇಳಿ ಬಂದಿದ್ಯಂತೆ ಇದೂ ಸೇರಿದಂತೆ ಇವರ ಮೇಲೆ ಸಾಕಷ್ಟು ಆರೋಪಗಳಿರೋದು ನೋಡಿದ್ರೆ ಇಲ್ಲಿನ ಮತದಾರ ಇವರ ಸಹವಾಸ ಸಾಕಪ್ಪ ಈ ಬಾರಿ ಜೆಡಿಎಸ್ ಗೆ ಚಾನ್ಸ್ ಕೊಟ್ಟು ನೋಡೋಣ ಅಂತಾ ಮುಂದಾದ್ರೂ ಆಶ್ಚರ್ಯ ಇಲ್ಲ.

                                                       ಪಿನ್ ಪಾಯಿಂಟ್

ಟಿ ನರಸಿಪುರ ಕ್ಷೇತ್ರದಲ್ಲಿ ಇಲ್ಲಿವರೆಗೆ ಸಚಿವ ಹೆಚ್ ಸಿ ಮಹದೇವಪ್ಪನವರ ಹವಾ ಇದ್ದಿದ್ದು ನಿಜವಾದ್ರೂ ಕೂಡಾ ಕಳೆದ ಬಾರಿಯ ರಿಸಲ್ಟ್ ಅಂದ್ರೆ ಮಹದೇವಪ್ಪನವರು ಕೇವಲ 326 ಮತಗಳಿಂದ ಗೆದ್ದಿರೋದು ನೋಡಿದ್ರೆ ಸಚಿವರ ಹವಾ ಕಡಿಮೆ ಆಗಿರೋದು ಗೊತ್ತಾಗತ್ತೆ.

ಆದ್ರೆ ಈ ಬಾರಿ ತಾವು ಸೋತು ಬಿಡಬಹುದು ಅನ್ನೋ ಭಯಕ್ಕೋ ಏನೋ ತಾವು ಕ್ಷೇತ್ರದಲ್ಲಿ ನಿಲ್ಲದೆ ತಮ್ಮ ಪುತ್ರ ಸುನೀಲ್ ಬೋಸ್ ರನ್ನು ನಿಲ್ಲಿಸೋದಕ್ಕೆ ಮುಂದಾಗಿರೋದ್ರಿಂದ ದೊಡ್ಡ ಪೈಟ್ ನಿರೀಕ್ಷಿಸೋದು ಕಷ್ಟ. ಇನ್ನು ಇತ್ತ ಕಡೆ ಕಳೆದ ಬಾರಿ ಟಫ್ ಫೈಟ್ ಕೊಟ್ಟಿದ್ದ ಜೆಡಿಎಸ್ ಗೆ ಅತೀ ಸನಿಹದಲ್ಲೇ ಗೆಲುವು ಕೈ ತಪ್ಪಿತ್ತು. ಆದ್ರೆ ಈ ಬಾರಿ ಹಾಗಲ್ಲ ಹೇಗಾದ್ರೂ ಕ್ಷೇತ್ರವನ್ನು ಗೆಲ್ಲಲೇ ಬೇಕು ಅಂತಾ ಪಣ ತೊಟ್ಟಿರೋ ದಳಪತಿಗಳು ಅಶ್ವಿನ್ ಅನ್ನೋ ಯುವ ನಾಯಕನನ್ನು ಕಣಕ್ಕಿಳಿಸಿ ಗೆಲ್ಲಿಸೋದಕ್ಕೆ ಮುಂದಾಗಿದ್ದಾರೆ. ಸಚಿವರ ಹಾಗೂ ಅವ್ರ ಪುತ್ರನ ವಿರುದ್ಧ ಇರೋ ಆರೋಪಗಳು, ಆಡಳಿತ ವಿರೋಧಿ ಅಲೆ, ಹಾಗೂ ಕುಮಾರ ಸ್ವಾಮಿ ಅವ್ರು ಸಿಎಂ ಆಗಬೇಕು ಅನ್ನೋ ಜನರ ನಿಲುವು ಮತಗಳಾಗಿ ಪರಿವರ್ತನೆ ಆದ್ರೆ ಈ ಬಾರಿ ತೆನೆ ಹೊತ್ತ ಮಹಿಳೆ ಇಲ್ಲಿ ಗೆಲುವಿನ ನಗೆ ಬೀರೋದು ಗ್ಯಾರಂಟಿ ಅಂತಿದ್ದಾರೆ ಪ್ರಜ್ನಾವಂತ ಮತದಾರರು.