ಗಿಳಿ ಕೋಪಕ್ಕೆ ಬೆಚ್ಚಿದ ಸಚಿವ ಎಚ್.ಕೆ.ಪಾಟೀಲ್!!

ಅಲ್ಲೊಂದು ಪ್ರಾಣಿ ಸಂಗ್ರಹಾಲಯದ ಉದ್ಘಾಟನಾ ಸಮಾರಂಭವಿತ್ತು. ಸಚಿವರು ಉದ್ಘಾಟಕರಾಗಿ ಆಗಮಿಸಿದ್ದರು. ವಾಡಿಕೆಯಂತೆ ಉದ್ಘಾಟನೆಗಾಗಿ ಗಿಳಿಯೊಂದನ್ನು ಹಾರಿ ಬಿಡಲು ಕೈಗೆತ್ತಿಕೊಂಡ ಸಚಿವರಿಗೆ ಗಿಳಿ ಜೋರಾಗಿ ಕಚ್ಚಿ ಅಧ್ವಾನ ಸೃಷ್ಟಿಸಿತು. ಇಷ್ಟಕ್ಕೂ ಇಂತಹದೊಂದು ಘಟನೆ ನಡೆದಿದ್ದೆಲ್ಲಿ ಗೊತ್ತಾ ಗದಗದಲ್ಲಿ.


ಗದಗ ಜಿಲ್ಲೆ ಬಿಂಕದಕಟ್ಟಿ‌ ಗ್ರಾಮದಲ್ಲಿ ಕಿರು ಮೃಗಾಲಯವೊಂದನ್ನು ನಿರ್ಮಿಸಲಾಗಿತ್ತು. ನಿನ್ನೆ ಮೃಗಾಲಯದ ಉದ್ಘಾಟಕರಾಗಿ ಗದಗ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ್ ಆಗಮಿಸಿದ್ದರು. ಈ ವೇಳೆ ಸಾಂಕೇತಿಕವಾಗಿ ಮೃಗಾಲಯ ಉದ್ಘಾಟಿಸುವ ನಿಟ್ಟಿನಲ್ಲಿ‌ ಗಿಳಿಯೊಂದನ್ನು ಹಾರಿ ಬಿಡಲು ಸಚಿವರ ಕೈಗೆ ನೀಡಲಾಯಿತು.


ಹೀಗೆ ಹಾರಿಬಿಡಲು ಗಿಳಿಯನ್ನು ಕೈಗೆತ್ತಿಕೊಂಡ ಸಚಿವರಿಗೆ ಗಿಳಿ ಬಲವಾಗಿ‌ ಕಚ್ಚಿದೆ. ಗಿಳಿ ಎರಡೆರಡು ಭಾರಿ ಕಚ್ಚುತ್ತಿದ್ದಂತೆ ಕಂಗಾಲಾದ ಸಚಿವರು ಜೋರಾಗಿ ಕಿರುಚಿಕೊಂಡು ಅದನ್ನು ದೂರ ಎಸೆದಿದ್ದಾರೆ. ಒಟ್ಟಿನಲ್ಲಿ ಉದ್ಘಾಟನೆಯ ವೇಳೆ ಗಿಳಿ ಮಾಡಿದ ಅವಾಂತರಕ್ಕೆ ಸಚಿವರು , ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ದೃಶ್ಯ ಇದೀಗ ಎಲ್ಲರ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ.