ಸಕ್ರೆಬೈಲಿನಲ್ಲಿ ಆನೆಮರಿಗೂ ನಾಮಕರಣ.

ಮುದ್ದಾದ ಮಕ್ಕಳಿಗೆ ಸಂಭ್ರಮದಿಂದ ನಾಮಕರಣ ಮಾಡಿ ಹೆಸರಿಟ್ಟು ಸಂಭ್ರಮಿಸೋದನ್ನು ನೀವು ನೋಡಿದ್ದಿರಿ. ಆದರೇ ಇಲ್ಲಿ ಪುಟಾಣಿ ಆನೆಮರಿಗೂ ಅದ್ದೂರಿಯಾಗಿ ನಾಮಕರಣ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಗೆ ಬಾಲಾಜಿ ಎಂದು ಹೆಸರಿಟ್ಟು ಸಂಭ್ರಮಿಸಿದರು. ಅಷ್ಟೇ ಅಲ್ಲ ಕೇಕ್ ಕೂಡ ಕತ್ತರಿಸಿ ಪ್ರಾಣಿಪ್ರೇಮ ಮರೆದಿದ್ದಾರೆ.


ಶಿವಮೊಗ್ಗದ ಗಾಜನೂರು ಬಳಿಯ ಸಕ್ರೆಬೈಲು ಆನೆ ಬಿಡಾರದಲ್ಲಿ ಇಂತಹದೊಂದು ಅಪರೂಪದ ನಾಮಕರಣ ಶಾಸ್ತ್ರ ನಡೆಯಿತು. ಈ ಮರಿಯಾನೆ ಕಳೆದ ವರ್ಷದ ಅಕ್ಟೋಬರ್​ನಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಕಾಡಿನ ಇಂಗುಗುಂಡಿಯಲ್ಲಿ ಬಿದ್ದು ಸಾವಿನ ಅಂಚಿನಲ್ಲಿತ್ತು. ಅದನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸಕ್ರೆಬೈಲಿಗೆ ಕರೆತರಲಾಗಿತ್ತು.

ಸಕ್ರೆಬೈಲಿಗೆ ಕರೆತಂದು ಆರೈಕೆ ಮಾಡಿದ ಮರಿಯಾನೆ ಚೇತರಿಸಿಕೊಂಡಿತ್ತು. ಸಹಜವಾಗಿ ತಾಯಿಯಿಲ್ಲದ ಮರಿಯಾನೆಗೆ ತಬ್ಬಲಿತನ ಕಾಡುತ್ತದೆ. ಆದರೇ ಸಿಬ್ಬಂದಿ ಮಾತ್ರ ಮರಿಯಾನೆಗೆ ಪ್ರೀತಿಯಿಂದ ಆರೈಕೆ ಮಾಡಿ ತಬ್ಬಲಿತನ ಕಾಡದಂತೆ ನೋಡಿಕೊಂಡಿದ್ದರು. ಇದೀಗ ಒಂದು ವರ್ಷ ಪೊರೈಸಿದ ಹಿನ್ನೆಲೆಯಲ್ಲಿ ಕಾವಾಡಿಗಳು, ಮಾವುತರು ಹಾಗೂ ಅರಣ್ಯ ಇಲಾಖೆ ಮರಿಯಾನೆ ಬಾಲಾಜಿಗೆ ನಾಮಕರಣೋತ್ಸವ ನಡೆಸಿ ತಮ್ಮ ಪ್ರಾಣಿಪ್ರೀತಿ ಮೆರೆದಿದ್ದಾರೆ.