ಹಾಸನದಲ್ಲಿ ದಶಕದ ನಂತರ ಒಂದಾದ ಅಣ್ಣ-ತಂಗಿ!

Hassan: After 10 Years Brother- Sister amalgamate to Each other.
Hassan: After 10 Years Brother- Sister amalgamate to Each other.

ಅದೆಲ್ಲೋ ತುರ್ತು ಪರಿಸ್ಥಿತಿಯಲ್ಲಿ ಕಳೆದುಹೋದ ಅಣ್ಣ-ತಂಗಿಯರು ಮತ್ಯಾವಾಗಲೋ ಅಕಸ್ಮಾತಾಗಿ ಒಂದಾಗೋದನ್ನು ನಾವು ಸಿನಿಮಾಗಳಲ್ಲಿ ನೋಡಿರತಿವಿ. ಆದರೇ ಸಿನಿಮಾ ಕಥೆಯನ್ನೇ ನಾಚಿಸುವಂತೆ ಅಣ್ಣ-ತಂಗಿ ಇಬ್ಬರು ದಶಕಗಳ ನಂತ್ರ ಮತ್ತೆ ಒಂದಾದ ಅಪರೂಪದ ಘಟನೆ ಹಾಸನದಲ್ಲಿ ನಡೆದಿದೆ.

ಬಾಲ್ಯದಲ್ಲೇ ಹೆತ್ತವರನ್ನ ಕಳೆದುಕೊಂಡು, ಸಂಬಂಧಿಕರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿ ಬೀದಿ ಪಾಲಾಗಿದ್ದ ಅಣ್ಣ ತಂಗಿ ಇದೀಗ ಮತ್ತೆ ಒಂದಾಗಿದ್ದಾರೆ. ಬೇರೆ ಬೇರೆಯಾಗಿದ್ದ ಅಣ್ಣ ಮಂಜುನಾಥ್, ತಂಗಿ ಭಾಗ್ಯ ಮತ್ತೆ ಒಂದಾದ ಅಣ್ಣ-ತಂಗಿಯರು. ಈ ಮಕ್ಕಳು ಚಿಕ್ಕವರಿದ್ದಾಗ ನೋಡಿಕೊಳ್ಳಲು ಕಷ್ಟವಾಗುತ್ತೆ ಅಂತಾ ಈ ಇಬ್ಬರು ಮಕ್ಕಳ ಚಿಕ್ಕಮ್ಮ ಇವರನ್ನು ಹೊಳೆನರಸೀಪುರ ತಾಲೂಕಿನ ಮಳಲಿ ಗ್ರಾಮದ ದೇವಸ್ಥಾನದ ಬಳಿ ಬಿಟ್ಟು ಹೋಗಿದ್ರು.. ಅಲ್ಲೇ ದೇವಸ್ಥಾನದಲ್ಲಿ ಪ್ರಸಾದವನ್ನ ತಿಂದು ಎರಡು ದಿನ ದೂಡಿದ ಇವರಿಗೆ ಮೂರನೇ ದಿನ ಪ್ರಸಾದವೇ ಸಿಗಲಿಲ್ಲ.. ಆಗ ಈ ಮಕ್ಕಳ ದಯನೀಯ ಸ್ಥಿತಿಯನ್ನ ನೋಡಿದ ಗ್ರಾಮದ ಶಿಕ್ಷಕ ಗೌಡೇಗೌಡ ಎಂಬುವರು ಇವರಿಗೆ ಆಶ್ರಯ ನೀಡಿದ್ರು.. ಆಗ ಇಬ್ಬರು ಮಕ್ಕಳು ಇರೋದನ್ನ ನೋಡಿದ ಗ್ರಾಮದ ಮಹಿಳೆಯೊಬ್ಬಳು, ತಾನು ಬಾಲಕಿಯೊಬ್ಬಳನ್ನ ಸಾಕುವುದಾಗಿ ಕರೆದುಕೊಂಡು ಹೋಗಿದ್ದಳು.

 

ಆದರೆ ಕರೆದುಕೊಂಡು ಹೋದ ಕೆಲವೇ ದಿನಗಳಲ್ಲಿ ಆ ಮಗುವನ್ನ ಸಕಲೇಶಪುರದ ಕಾಫಿ ತೋಟದ ಮಾಲೀಕನಿಗೆ ಮಾರಾಟ ಮಾಡಿ, ಬಾಲಕಿ ಕಾಣೆಯಾಗಿದ್ದಾಳೆ ಅಂತಾ ನಾಟಕ ಆಡಿದ್ದಳು. ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ ಚಿಕ್ಕ ಹುಡುಗಿ ಭಾಗ್ಯ, ಅಲ್ಲಿ ಕಿರುಕುಳ ಹೆಚ್ಚಾದಾಗ ಇತ್ತೀಚಿಗೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ.  ಕೊನೆಗೆ ಮಕ್ಕಳ ರಕ್ಷಣಾ ಸಮಿತಿಯವರು ಭಾಗ್ಯಳಿಗೆ ಆಶ್ರಯ ನೀಡಿ, ವಿಚಾರಿಸಿದಾಗ ತನ್ನ ಬಾಲ್ಯದ ಘಟನೆಯನ್ನ ಎಳೆ ಎಳೆಯಾಗಿ ಹೇಳಿದ್ದಳು. ಈ ಮಾಹಿತಿ ಆಧರಿಸಿ ಸರ್ಚಿಂಗ್ ಆರಂಭಿಸಿದ ಮಕ್ಕಳ ರಕ್ಷಣ ಸಮಿತಿಗೆ ಭಾಗ್ಯಳ ಅಣ್ಣ ಮಂಜುನಾಥನಿಗೆ ಆಶ್ರಯ ನೀಡಿದ ಮನೆ ಸಿಕ್ಕಿದೆ. ಮಂಜುನಾಥನನ್ನ ಮನೆ ಮಗನಿಗಿಂತಲೂ ಒಂದು ಪಟ್ಟು ಹೆಚ್ಚು ಪ್ರೀತಿ ತೋರಿಸಿ ಸಲಹುತ್ತಿದ್ದ ಶಿಕ್ಷಕ ಗೌಡೇಗೌಡರು ಆರು ತಿಂಗಳ ಹಿಂದಷ್ಟೇ ಸಾವನ್ನಪ್ಪಿದ್ದಾರೆ. ಅವರ ಮಗ ಪೂರ್ಣಚಂದ್ರ ತೇಜಸ್ವಿ, ಮಂಜುನಾಥನನ್ನ ಹೊಣೆ ಹೊತ್ತು ತಮ್ಮನಿಗಿಂತ ಹೆಚ್ಚಿನ ಪ್ರೀತಿ ತೋರಿಸಿ ಎಸ್​ಎಸ್ಎಲ್​ಸಿ ವ್ಯಾಸಂಗ ಮಾಡಿಸುತ್ತಿದ್ದಾರೆ.

ಒಟ್ಟಾರೆ ಮಕ್ಕಳ ಕಲ್ಯಾಣ ಸಮಿತಿಯ ಪ್ರಯತ್ನದಿಂದಾಗಿ ನಿನ್ನೆ ಅಣ್ಣ ತಂಗಿ ದಶಕದ ನಂತ್ರ ಒಂದಾಗಿ ಖುಷಿಪಟ್ರು. ತಂಗಿಯನ್ನ ಬಿಟ್ಟು ಇರಲಾರೆ ಅಂತಾ ಅಣ್ಣ ಮಂಜುನಾಥ್ ಹಠ ಹಿಡಿದಿದ್ದಾನೆ, ತಂಗಿಯೂ ಅಣ್ಣನ ಪ್ರೀತಿ ನನಗೆ ಬೇಕು ಅಂತಾ ಆಸೆ ಪಟ್ಟಿದ್ದಾಳೆ.. ಮುಂದೇನು ಅನ್ನೋ ತೀರ್ಮಾನವನ್ನ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ತೆಗೆದುಕೊಳ್ಳಲಿದೆ. ಒಟ್ಟಿನಲ್ಲಿ ಇಂದಿಗೂ ಮರೆಯಾಗದ ಮಾನವೀಯತೆಯಿಂದಾಗಿ ಅಣ್ಣ-ತಂಗಿ ಮತ್ತೆ ಒಂದಾಗುವಂತಾಗಿದ್ದು ಮಾತ್ರ ಅನುಕರಣೀಯವೇ ಸರಿ.