ಇಲ್ಲಿ ಮೇಕೆ-ಕುರಿ ಕಾವಲಿಗಿದೆ ವಾನರ ​- ಇದೊಂದು ವಿಭಿನ್ನ ಸ್ನೇಹಕತೆ!

 

ಮನುಷ್ಯರ ನಡುವಿನ ಸಂಬಂಧಗಳು ಅಳಿಸಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರಾಣಿಗಳ ನಡುವಿನ ಬಂಧ ಮನುಷ್ಯರಿಗೆ ಮಾದರಿಯಾಗಿ ಕಂಡುಬರುತ್ತಿದೆ. ಇಂತಹುದೇ ಸ್ನೇಹವೊಂದು ನಂಜನಗೂಡಿನ ಕೋಣನಪುರ ಗ್ರಾಮದಲ್ಲಿ ಮೇಕೆ ಹಾಗೂ ವಾನರ ನಡುವೆ ಬೆಸೆದುಕೊಂಡಿದೆ. ಹೌದು ನಂಜನಗೂಡಿನಲ್ಲಿ ಕುರಿ ಮೇಕೆಗಳೊಂದಿಗೆ ಬೆರೆತಿರುವ ಕೋತಿಯೊಂದು ಅಚ್ಚರಿ ಮೂಡಿಸಿದೆ. ಕೋಣನಪುರದ ಬಸಪ್ಪ ಎಂಬುವರಿಗೆ ಸೇರಿದ ಕುರಿ ಮೇಕೆಗಳ ಹಿಂಡಿನ ಮಧ್ಯೆ ಕಾಣಿಸಿಕೊಳ್ಳುವ ಕೋತಿರಾಯ ಎಲ್ಲವನ್ನೂ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಬಸಪ್ಪ ರವರ ಮನೆಯಲ್ಲೇ ಆಶ್ರಯ ಪಡೆದುಕೊಂಡಿರುವ ಕೋತಿ ಕುರಿ ಆಡುಗಳ ಜೊತೆ ತಾನೂ ಒಂದಾಗಿದೆ.

ಚಿಕ್ಕ ವಯಸ್ಸಿನಲ್ಲಿ ತಾಯಿಯಿಂದ ಬೇರ್ಪಟ್ಟ ಕೋತಿ ಬಸಪ್ಪ ರವರ ಕೈ ಸೇರಿದೆ. ಆಡಿನ ಹಾಲನ್ನ ಕುಡಿದು ಬೆಳೆದ ಕೋತಿ ಆಡನ್ನೇ ತಾಯಿಯಂತೆ ಕಾಣುತ್ತಿದೆ. ಹುಲ್ಲು ಮೇಯಲು ಹೋಗುವ ವೇಳೆಗೆ ಮೇಕೆಗಳ ಮೇಲೆ ಸವಾರಿ ಮಾಡಿಕೊಂಡೇ ಬರುವ ಕೋತಿ ಯಾರನ್ನೂ ಹತ್ತಿರ ಸುಳಿಯಲು ಬಿಡುವುದಿಲ್ಲ.ಯಾವುದೇ ಮೇಕೆಯಾಗಲಿ ಕುರಿಯಾಗಲಿ ಹಿಂಡಿನಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ.
ಬಸಪ್ಪ ರವರಿಗೆ ಮನೆಮಗನಂತೆ ಕಾರ್ಯನಿರ್ವಹಿಸುವ ವಾನರ ಕುರಿ ಮೇಕೆ ಹಿಂಡಿನ ದಳಪತಿ. ಹಿಂಡಿನ ಬಳಿ ಹೊಸಬರು ಬಂದರೆ ಹೆದರಿಸಿ ಓಡಿಸುತ್ತದೆ. ವಿರಾಮ ಕಾಲದಲ್ಲಿ ಬಸಪ್ಪ ಜೊತೆ ಕುಳಿತು ಪ್ರೀತಿಯಿಂದ ಅಪ್ಪಿಕೊಳ್ಳುತ್ತದೆ. ಗ್ರಾಮದ ಜನತೆಗೂ ಕೋತಿರಾಯನ ಸೇವೆ ಅಚ್ಚರಿ ಮೂಡಿಸಿದೆ. ಒಟ್ಟಾರೆ ಕುರಿಮೇಕೆ ಹಿಂಡನ್ನ ಕಾಯಲು ಬಂದ ವಾನರ ಒಳ್ಳೆಯ ದಳಪತಿಯಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾನೆ ..