ಹೊಟೆಲ್ ಗ್ರಾಹಕರಿಗೆ ಖುಷಿಯ ವಿಚಾರ!!!

ನಿನ್ನೆ ಜಿಎಸ್​ಟಿ ಇಳಿಕೆಗೆ ಗ್ರಾಹಕರು ಖುಷಿಯಾಗಿರುವ ಬೆನ್ನಲ್ಲೇ ಸಿಲಿಕಾನ ಸಿಟಿ ಹೋಟೆಲ್ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಕಾದಿದೆ. ಹೌದು ಹೊಟೇಲ್​ಗಳ ತೆರಿಗೆ ದರದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ನವೆಂಬರ್​​​ 15 ರಿಂದ ಹೊಟೇಲ್​ ದರದಲ್ಲಿ ಇಳಿಕೆಯಾಗಲಿದೆ.
ನಗರದಾದ್ಯಂತ ಇರುವ ಹೊಟೇಲ್​ಗಳಿಗೆ ಇದು ಅನ್ವಯವಾಗಲಿದ್ದು, ನವೆಂಬರ್ 15 ರಿಂದ ಜಾರಿಯಾಗಲಿದೆ. ಈ ಮೊದಲು ಜಿಎಸ್​ಟಿ ಹಿನ್ನೆಲೆಯಲ್ಲಿ ನಗರದಾದ್ಯಂತ ಇರುವ ಎಸಿ ಹೊಟೇಲ್​ಗಳಿಗೆ ಶೇಕಡಾ 18 ಮತ್ತು ನಾನ್​​ ಎಸಿ ಹೊಟೇಲ್​​ಗಳಿಗೆ 12 ಶೇಕಡಾ ತೆರಿಗೆ ವಿಧಿಸಲಾಗಿತ್ತು.


ಇದೀಗ ಕೇಂದ್ರ ಸರ್ಕಾರ ವಿಧಿಸಿರುವ ಜಿಎಸ್​​ಟಿ ತೆರಿಗೆಯಲ್ಲಿ ಕೆಲ ವಸ್ತುಗಳನ್ನು ಹಿಂಪಡೆಯಲಾಗಿರೋದರಿಂದ ನಗರದ ಹೊಟೇಲ್​​ಗಳ ದರ ಇಳಿಕೆಯಾಗಲಿದೆ. ಇದೀಗ ಎಲ್ಲ ಹೊಟೇಲ್​​ಗಳಿಗೂ ಏಕರೂಪದಲ್ಲಿ ಶೇಕಡಾ 5 ರಷ್ಟು ಮಾತ್ರ ತೆರಿಗೆ ಅನ್ವಯವಾಗಲಿದೆ ಎಂದು ಬೃಹತ ಬೆಂಗಳೂರು ಹೊಟೇಲ್ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ ಬಿಟಿವಿಗೆ ಮಾಹಿತಿ ನೀಡಿದರು.


ನಿನ್ನೆಯಷ್ಟೇ ಗುವಾಹಟಿಯಲ್ಲಿ ಹಣಕಾಸು ಸಚಿವ ಜೇಟ್ಲಿ ನೇತೃತ್ವದಲ್ಲಿ ನಡೆದ ಜಿಎಸ್​ಟಿ ಸಮಿತಿ ಸಭೆಯಲ್ಲಿ 177 ವಸ್ತುಗಳ ಶೇ.28ರಷ್ಟು ತೆರಿಗೆಯನ್ನು ಶೇ.18ಕ್ಕೆ ಇಳಿಸಲಾಗಿತ್ತು. ಚೂಯಿಂಗ್​ ಗಮ್​, ಚಾಕಲೇಟ್​, ಡಿಯೋಡ್ರೆಂಟ್​, ವಾಷಿಂಗ್​ ಪೌಡರ್​, ಡಿಟರ್ಜೆಂಟ್​, ಮಾರ್ಬಲ್​,ಶಾಂಪೂ, ಟೂತ್​ಪೇಸ್ಟ್​ , ಪೌಷ್ಟಿಕಾಂಶಯುಕ್ತ ಪಾನೀಯಗಳ ಮೇಲಿನ ತೆರಿಗೆ ಇಳಿಸಲಾಗಿತ್ತು.